
ಬೆಳಗಾವಿ
ಮಾಜಿ ಸೈನಿಕ ಸಂದೀಪ್ ಮಾಂಜರಿ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಪಘಾತವಾಗಿ ಬಿಂಬಿಸಲಾಗಿದ್ದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಇದೀಗ 9ಕ್ಕೆ ಏರಿಕೆಯಾಗಿದೆ.
ಪ್ರಕರಣವನ್ನು ಮುಚ್ಚಿಹಾಕಲು ಸಹಕರಿಸಿದ್ದ ಆರೋಪದಡಿ ಆರ್‌ಎಂಪಿ ವೈದ್ಯ ಬಸವರಾಜ್ ಭಸ್ಮೆ, ಬೆಳಗಾವಿ ಪೊಲೀಸ್ ಕಮೀಷನರ್ ಕಚೇರಿಯ ಎಫ್‌ಡಿಎ ಅಶೋಕ, ಇಬ್ಬರು ಎಫ್‌ಎಸ್‌ಎಲ್ ಅಧಿಕಾರಿಗಳು ಸೇರಿದಂತೆ ಇನ್ನೂ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಪ್ರಕರಣ ರೀ-ಓಪನ್ ಆಗುತ್ತಿದ್ದಂತೆ ಮೃತ ಸಂದೀಪ್ ಮಾಂಜರಿಯ ಪತ್ನಿ ಸುಮಾ ಹಾಗೂ ಆಕೆಯ ಪ್ರಿಯಕರ ಪುಂಡಲೀಕನನ್ನು ಪೊಲೀಸರು ಬಂಧಿಸಿದ್ದರು. 2 ಕೋಟಿ ರೂ. ವಿಮೆ ಹಣಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವ ಆರೋಪ ಇವರ ಮೇಲಿದೆ.
ವಿಚಾರಣೆ ವೇಳೆ ಸುಮಾ ಮತ್ತು ಪುಂಡಲೀಕ ಉಳಿದ ಆರೋಪಿಗಳ ಹೆಸರು ಬಹಿರಂಗಪಡಿಸಿದ ಹಿನ್ನೆಲೆ ಮತ್ತಷ್ಟು ಬಂಧನಗಳು ನಡೆದಿವೆ ಎಂದು ತಿಳಿದುಬಂದಿದೆ.
ಪ್ರಸ್ತುತ ಎಲ್ಲಾ ಆರೋಪಿಗಳನ್ನು ಹಿಂಡಲಗಾ ಜೈಲಿಗೆ ಕಳುಹಿಸಲಾಗಿದ್ದು, ಯಮಕನಮರಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಘಟಪ್ರಭಾ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
