
ಬೆಳಗಾವಿ
ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ತನಿಖೆ ವೇಳೆ ಮತ್ತೊಂದು ಬೆಚ್ಚಿಬೀಳಿಸುವ ಅಂಶ ಬಹಿರಂಗವಾಗಿದೆ.
ಹೌದು. ಎರಡು ಕೋಟಿ ರೂ. ವಿಮೆ ಹಣಕ್ಕಾಗಿ ನಡೆದ ಕೊಲೆ ಪ್ರಕರಣವನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಪತ್ನಿ ಸುಮಾ ಮಂಜರಗಿ ವಿರುದ್ಧ ಈಗ ಮತ್ತಷ್ಟು ಆಘಾತಕಾರಿ ವಿಷಯಗಳು ಸಮಾಜವನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಪ್ರಕರಣ ಮುಚ್ಚಿಹಾಕಲು ಹಾಗೂ ಸತ್ಯಾಂಶ ಹೊರಬರದಂತೆ ಮಾಡಲು ಯತ್ನಿಸುತ್ತಿದ್ದ ಸುಮಾ ಮಂಜರಗಿಯನ್ನು ಕೆಲವರು ಬೆದರಿಸಿ ಹಣ ವಸೂಲಿ ಮಾಡಿದ್ದರೆಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಯೂಟ್ಯೂಬರ್ ಸೇರಿ ಕೆಲ ವ್ಯಕ್ತಿಗಳು “ಕೊಲೆ ಪ್ರಕರಣದ ಸಂಪೂರ್ಣ ಮಾಹಿತಿ ಬಹಿರಂಗಪಡಿಸುತ್ತೇವೆ” ಎಂದು ಬೆದರಿಕೆ ಹಾಕಿ ಲಕ್ಷಾಂತರ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು ಎಂದು ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ.
ಬೆದರಿಕೆಗೆ ಹೆದರಿದ ಸುಮಾ ಮಂಜರಗಿ 4 ರಿಂದ 5 ಲಕ್ಷ ರೂ.ವರೆಗೆ ಹಣ ನೀಡಿದ್ದಾಳೆ ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭ್ಯವಾಗಿದೆ. ಆದರೆ ಹಣ ಪಡೆದಿದ್ದರೂ ಕೆಲವರು ನಿರಂತರವಾಗಿ ಆಕೆಯ ಮೇಲೆ ಒತ್ತಡ ಹೇರುತ್ತಿದ್ದರೆಂಬ ಸಂಗತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಕೆಲ ಆರೋಪಿಗಳು ಹಣದ ಜೊತೆಗೆ ಲೈಂಗಿಕ ಸಂಬಂಧಕ್ಕೂ ಒತ್ತಾಯಿಸುತ್ತಿದ್ದರು ಎನ್ನುವ ಅಂಶ ತನಿಖಾಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಪ್ರಕರಣದ ವಿಡಿಯೋ, ದಾಖಲೆಗಳು ಹಾಗೂ ಚಾಟ್‌ಗಳ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮಾಜಿ ಸೈನಿಕ ಸಂದೀಪ್ ಮಂಜರಗಿ ಸಾವನ್ನು ಆರಂಭದಲ್ಲಿ ಬೈಕ್ ಸ್ಕಿಡ್ ಅಪಘಾತವೆಂದು ಬಿಂಬಿಸಲಾಗಿತ್ತು. ಆದರೆ ಬಳಿಕ ಇದು ಪೂರ್ವನಿಯೋಜಿತ ಕೊಲೆ ಎಂಬ ಶಂಕೆ ಗಟ್ಟಿಯಾಗಿದ್ದು, ಪತ್ನಿ ಸೇರಿ ಹಲವರ ಬಂಧನದೊಂದಿಗೆ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿತ್ತು. ಈಗ ಕೊಲೆ ಪ್ರಕರಣ ಮುಚ್ಚಿಹಾಕುವ ಹೆಸರಿನಲ್ಲಿ ನಡೆದಿದ್ದ ಬ್ಲ್ಯಾಕ್‌ಮೇಲ್, ಹಣ ವಸೂಲಿ ಹಾಗೂ ಲೈಂಗಿಕ ಒತ್ತಾಯದ ಆರೋಪಗಳು ಹೊರಬಿದ್ದಿರುವುದು ಪ್ರಕರಣವನ್ನು ಇನ್ನಷ್ಟು ಗಂಭೀರ ಹಂತಕ್ಕೆ ಕೊಂಡೊಯ್ದಿದೆ.
ಪ್ರಕರಣ ಸಂಬಂಧ ಪೊಲೀಸರು ಇನ್ನಷ್ಟು ಮಂದಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
