
ಬೆಳಗಾವಿ
ಮದ್ಯದ ಅಮಲಿನಲ್ಲಿದ್ದ ಮಹಿಳೆ ಮೊಬೈಲ್ ಕೊಡದ ಹಿನ್ನೆಲೆಯಲ್ಲಿ ಯುವಕನನ್ನು ಕೊಲೆ ಮಾಡಿದ ಮಹಿಳೆಗೆ ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್ ನಾಯಕ ಅವರು ಮಹಿಳೆಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ ಎಂದು ಸರಕಾರಿ ಅಭಿಯೋಜಕ ನಾರಾಯಣ ಆರಿ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ 2023 ಏಪ್ರಿಲ್ 30ರಂದು ರಾತ್ರಿ ಕೀರ್ತಿ ಹೋಟೆಲ್ ಸಮೀಪದ ಡೋರ ಗಲ್ಲಿ ಕ್ರಾಸ್ ಬಳಿ ಫಿರ್ಯಾದಿ ಹಾಗೂ ನಾಗರಾಜ ಭೀಮಶಿ ರಾಗಿಪಾಟೀಲ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಮದ್ಯದ ಅಮಲಿನಲ್ಲಿದ್ದ ಜಯಶ್ರೀ ಪವನ ಪವಾರ ಮೊಬೈಲ್ ನೀಡುವಂತೆ ಕೇಳಿದ್ದಳು. ಇದಕ್ಕೆ ಮರು ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ವಾಗ್ವಾದ ನಡೆದು, ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ನಾಗರಾಜನ ಎದೆಗೆ ಇರಿದಿದ್ದಳು. ಗಂಭೀರವಾಗಿ ಗಾಯಗೊಂಡ ನಾಗರಾಜ ಮೃತಪಟ್ಟಿದ್ದ ಎಂದರು.
ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಅಂದಿನ ಪಿಐ ಪಾಲ್ ಪ್ರಿಯಕುಮಾರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ ಅವರು ಆರೋಪಿ ಜಯಶ್ರೀ ಪವನ ಪವಾರಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ, ಮೃತನ ವಾರಸುದಾರರಿಗೆ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ ಎಂದರು.
