Monday, November 23, 2026
HomeBelagaviಮಾಜಿ ಸೈನಿಕನ ಕೊಲೆ ಮಾಡಿದ್ದ ಹೆಂಡತಿಯ ತಾಯಿ ಆತ್ಮಹತ್ಯೆ

ಮಾಜಿ ಸೈನಿಕನ ಕೊಲೆ ಮಾಡಿದ್ದ ಹೆಂಡತಿಯ ತಾಯಿ ಆತ್ಮಹತ್ಯೆ

ಬೆಳಗಾವಿ
ಈಗಾಗಲೇ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮಾಜಿ ಸೈನಿಕನ ಕೊಲೆ ಪ್ರಕರಣದ ಆಘಾತದಿಂದ ಮನನೊಂದ ತಾಯಿ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ನಡೆದಿದೆ.
ಮಹಾದೇವಿ ಘೋಡಗೇರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಇಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತಮ್ಮ ನಿವಾಸದಲ್ಲೇ ಅವರು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದೆ.
ಇದೇ ಗ್ರಾಮದಲ್ಲಿ ಕೆಲವು ತಿಂಗಳುಗಳ ಹಿಂದೆ ನಡೆದಿದ್ದ ಸಂದೀಪ್ ಮಂಜರಗಿ ಕೊಲೆ ಪ್ರಕರಣ ರಾಜ್ಯದ ಗಮನ ಸೆಳೆದಿತ್ತು. ಸುಮಾರು 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಪತಿ ಸಂದೀಪ್ ಮಂಜರಗಿಯನ್ನು ಪತ್ನಿ ಸುಮಾ ಮಂಜರಗಿ ಸಂಚು ರೂಪಿಸಿ ಕೊಲೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣವು ಬೆಳಕಿಗೆ ಬಂದ ಬಳಿಕ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕುಟುಂಬದ ಒಳಜಗಳ, ಹಣದ ಲಾಲಸೆ ಹಾಗೂ ಸಂಬಂಧಗಳ ಸಂಕೀರ್ಣತೆ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.
ಪ್ರಕರಣದಲ್ಲಿ ಪ್ರಮುಖ ಆರೋಪಿ ಸುಮಾ ಮಂಜರಗಿ ಸದ್ಯ ಜೈಲಿನಲ್ಲಿ ಇದ್ದಾಳೆ. ಮಗಳ ಈ ಕೃತ್ಯದಿಂದ ಮಹಾದೇವಿ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಹೆತ್ತ ಮಗಳೇ ಪತಿಯ ಕೊಲೆ ಪ್ರಕರಣದಲ್ಲಿ ಸಿಲುಕಿರುವುದು ಮಾತ್ರವಲ್ಲದೆ, ಬಳಿಕ ಹೊರಬಂದ ಕೆಲವು ವೈಯಕ್ತಿಕ ವಿಚಾರಗಳು ಸಹ ತಾಯಿಗೆ ತೀವ್ರ ನೋವುಂಟುಮಾಡಿದ್ದವು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಮಗಳ ವರ್ತನೆ, ಕುಟುಂಬದ ಮೇಲೆ ಬಿದ್ದ ಕಳಂಕ ಹಾಗೂ ಸಮಾಜದಲ್ಲಿ ಎದುರಿಸಿದ ಮಾನಸಿಕ ಒತ್ತಡದಿಂದ ಮಹಾದೇವಿ ಸಾಕಷ್ಟು ಕುಗ್ಗಿಹೋಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಹೆಚ್ಚು ಮೌನವಾಗಿದ್ದು, ಆತಂಕದಲ್ಲೇ ಕಾಲ ಕಳೆಯುತ್ತಿದ್ದರು ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಇಂದು ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬದ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ. ಒಂದೇ ಕುಟುಂಬದಲ್ಲಿ ನಡೆದ ಸರಣಿ ದುರಂತಗಳು ಗ್ರಾಮಸ್ಥರನ್ನು ಕಂಗಾಲಾಗಿಸಿವೆ.
ಘಟನಾ ಸ್ಥಳಕ್ಕೆ ಕಾಕತಿ, ಯಮಕನಮರಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Total Views 414
RELATED ARTICLES

Most Popular

Recent Comments

KNN City News
Home
E-Paper