
ಬೆಳಗಾವಿ
ಬೆಳಗಾವಿಯ ‘ಗಾಳಿಪಟ ಮನುಷ್ಯ’ ಎಂದೇ ಖ್ಯಾತರಾಗಿರುವ ಸಂದೇಶ್ ಕಡ್ಡಿ ಅವರಿಗೆ ಇಂಡೋನೇಷ್ಯಾದ ಬಾಲಿಯ ಡೆನ್ಪಸಾರ್‌ನಲ್ಲಿ ಏಪ್ರಿಲ್ 23ರಿಂದ 27ರವರೆಗೆ ನಡೆಯಲಿರುವ ಪ್ರತಿಷ್ಠಿತ ಆಂಗೋನ್ ಅಂತರರಾಷ್ಟ್ರೀಯ ಗಾಳಿಪಟ ಉತ್ಸವನಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ.
ರೋಟರಿ ಕ್ಲಬ್ ಆಫ್ ಬೆಳಗಾವಿ ಜಿಲ್ಲೆ 3170 ಸದಸ್ಯರಾಗಿರುವ ಹಾಗೂ ರೋಟರಿ ಇಂಟರ್‌ನ್ಯಾಷನಲ್ ಫೆಲೋಶಿಪ್ ಆಫ್ ಕೈಟ್ಸ್‌ನ ಅಧ್ಯಕ್ಷರಾಗಿರುವ ಸಂದೇಶ್ ಕಡ್ಡಿ ಅವರು, ಈ ಉತ್ಸವದಲ್ಲಿ ತಮ್ಮ ಹೊಸ ಗಾಳಿಪಟ ವಿನ್ಯಾಸವನ್ನು ಅನಾವರಣಗೊಳಿಸುವ ಮೂಲಕ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿಶ್ವದ ವಿವಿಧ ದೇಶಗಳ ಗಾಳಿಪಟ ಕಲಾವಿದರೊಂದಿಗೆ ಬಾಲಿಯ ಆಕಾಶದಲ್ಲಿ ಭಾರತೀಯ ಗಾಳಿಪಟ ಕಲೆಯ ವೈಶಿಷ್ಟ್ಯವನ್ನು ಪ್ರದರ್ಶಿಸಲಿದ್ದಾರೆ.
ಕಳೆದ 15 ವರ್ಷಗಳಿಂದ ಗಾಳಿಪಟ ತಯಾರಿಕೆ ಮತ್ತು ಹಾರಾಟ ಕಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂದೇಶ್ ಕಡ್ಡಿ ಅವರು, ಈ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಿರುವುದು ಬೆಳಗಾವಿಗೆ ಹೆಮ್ಮೆ ತಂದಿದೆ. ಇದುವರೆಗೆ 20ಕ್ಕೂ ಹೆಚ್ಚು ದೇಶಗಳಲ್ಲಿ ನಡೆದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾರತವನ್ನು ಪ್ರತಿನಿಧಿಸಿ, ತ್ರಿವರ್ಣ ಧ್ವಜವನ್ನು ವಿಶ್ವದ ವೇದಿಕೆಗಳಲ್ಲಿ ಹಾರಿಸುವ ಮೂಲಕ ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ.
ಇತ್ತೀಚೆಗೆ ರೋಟರಿ ಇಂಟರ್‌ನ್ಯಾಷನಲ್ ಫೆಲೋಶಿಪ್ ಆಫ್ ಕೈಟ್ಸ್‌ನ ಅಧ್ಯಕ್ಷರಾಗಿ ಸತತ ಎರಡನೇ ಅವಧಿಗೆ ಆಯ್ಕೆಯಾಗಿರುವ ಬೆನ್ನಲ್ಲೇ ಬಾಲಿಯ ಪ್ರತಿಷ್ಠಿತ ಉತ್ಸವಕ್ಕೆ ಆಹ್ವಾನ ಲಭಿಸಿರುವುದು ಬೆಳಗಾವಿ ಜಿಲ್ಲೆ, ರೋಟರಿ ಕುಟುಂಬ ಹಾಗೂ ಭಾರತೀಯ ಗಾಳಿಪಟ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ.
ಗಾಳಿಪಟ ಹಾರಾಟವನ್ನು ಸಂಸ್ಕೃತಿ, ಶಾಂತಿ, ಏಕತೆ ಹಾಗೂ ಜಾಗತಿಕ ಸ್ನೇಹದ ಸಂಕೇತವಾಗಿ ಪ್ರಚಾರ ಮಾಡುತ್ತಿರುವ ಸಂದೇಶ್ ಕಡ್ಡಿ ಅವರು, ತಮ್ಮ ಸೃಜನಶೀಲತೆಯ ಮೂಲಕ ಭಾರತೀಯ ಗಾಳಿಪಟ ಕಲೆಯನ್ನು ವಿಶ್ವ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ.
