Monday, November 23, 2026
HomeBelagavi41 ವರ್ಷದ ಅರಣ್ಯ ಸೇವೆಗೆ ನಿಂಗಾನಿ ತೆರೆ; ತಂದೆಯ ಬಲಿದಾನವೇ ಬದುಕಿನ ತಿರುವು

41 ವರ್ಷದ ಅರಣ್ಯ ಸೇವೆಗೆ ನಿಂಗಾನಿ ತೆರೆ; ತಂದೆಯ ಬಲಿದಾನವೇ ಬದುಕಿನ ತಿರುವು

 

ಬೆಳಗಾವಿ
ತಂದೆಯ ಕರ್ತವ್ಯನಿಷ್ಠೆಗೆ ಸಂದ ಬೆಲೆ ಅವರ ಜೀವ. ಆ ದುರಂತದ ಬಳಿಕ ಅನುಕಂಪದ ಆಧಾರದ ಮೇಲೆ ಅರಣ್ಯ ಇಲಾಖೆಗೆ ಸೇರಿದ್ದ ಯುವಕ ನಾಲ್ಕು ದಶಕಗಳ ಸುದೀರ್ಘ ಸೇವೆಯ ನಂತರ ಅದೇ ಇಲಾಖೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಹುದ್ದೆಯಿಂದ ನಿವೃತ್ತಿಯಾಗುತ್ತಿರುವ ಅಪರೂಪದ ಸಾಧನೆ ಮಾಡಿದ್ದಾರೆ. ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಎಸ್.ಎಸ್. ನಿಂಗಾನಿ ಅವರ ಬದುಕಿನ ಪಯಣ ಹಲವರಿಗೆ ಸ್ಫೂರ್ತಿಯಾಗಿದೆ.
1985ರ ಫೆಬ್ರವರಿ 1ರಂದು ಫಾರೆಸ್ಟ್ ಗಾರ್ಡ್ ಆಗಿ ಸೇವೆಗೆ ಸೇರಿದ ನಿಂಗಾನಿ ಅವರು, ಜುಲೈ 31, 2026ರಂದು ಡಿಸಿಎಫ್ ಹುದ್ದೆಯಿಂದ ನಿವೃತ್ತಿಯಾಗಲಿದ್ದಾರೆ. ಅರಣ್ಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಪ್ರಾಮಾಣಿಕತೆ, ಶಿಸ್ತು ಮತ್ತು ಸೇವಾ ಮನೋಭಾವದಿಂದ ಗುರುತಿಸಿಕೊಂಡ ಅವರು ಇಲಾಖೆಯ ಅತ್ಯುನ್ನತ ಅಧಿಕಾರಿಗಳಲ್ಲಿ ಒಬ್ಬರಾಗುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
ನಿಂಗಾನಿ ಅವರ ತಂದೆ ಬೆಳಗಾವಿ ಅರಣ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದರು. ಕುಟುಂಬದ ಸಂಕಷ್ಟದ ನಡುವೆಯೇ ಅವರಿಗೆ ಅನುಕಂಪದ ಆಧಾರದ ಮೇಲೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ದೊರೆಯಿತು. ಅಂದು ಅಂದಿನ ಡಿಸಿಎಫ್ ಎ.ಕೆ. ವರ್ಮಾ ಅವರಿಂದ ನೌಕರಿ ಪತ್ರ ಪಡೆದಿದ್ದ ನಿಂಗಾನಿ, ನಾಲ್ಕು ದಶಕಗಳ ಬಳಿಕ ಅದೇ ಅಧಿಕಾರಿಯ ಹುದ್ದೆಗೆ ಏರಿ, ಅದೇ ಕಚೇರಿ ಕೊಠಡಿಯಲ್ಲಿ ಡಿಸಿಎಫ್ ಆಗಿ ಕಾರ್ಯನಿರ್ವಹಿಸಿರುವುದು ಅವರ ಬದುಕಿನ ಅತ್ಯಂತ ಭಾವನಾತ್ಮಕ ಅಧ್ಯಾಯವಾಗಿದೆ.
“ನೌಕರಿ ಪಡೆಯಲು ತಲೆತಗ್ಗಿಸಿ ನಿಂತಿದ್ದ ಅದೇ ಕೊಠಡಿಯಲ್ಲಿ ಡಿಸಿಎಫ್ ಆಗಿ ಕುಳಿತ ಕ್ಷಣ ಜೀವನದ ಅತ್ಯಂತ ಸಂತಸದ ಕ್ಷಣ. ಇದು ದೇವರ ಕೃಪೆ,” ಎಂದು ತಮ್ಮ ಅನುಭವವನ್ನು ನಿಂಗಾನಿ ಸ್ಮರಿಸಿದ್ದಾರೆ.
ಕೆಳಹಂತದ ಸಿಬ್ಬಂದಿಯಿಂದ ಉನ್ನತ ಅಧಿಕಾರಿವರೆಗೆ ಬೆಳೆದ ಅವರ ಸೇವಾ ಪಯಣದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಶಿಸ್ತು, ಸಾರ್ವಜನಿಕರೊಂದಿಗೆ ಹೊಂದಿದ್ದ ಉತ್ತಮ ಬಾಂಧವ್ಯ ಹಾಗೂ ಕರ್ತವ್ಯನಿಷ್ಠೆಯೇ ಯಶಸ್ಸಿನ ಮೂಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅರಣ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ ಖ್ಯಾತ ಇಂಗ್ಲಿಷ್ ಪತ್ರಿಕೆಯೊಂದು ನಿಂಗಾನಿ ಅವರನ್ನು “Friend of the Forest” ಎಂದು ಗೌರವಿಸಿತ್ತು. ಅವರ ಹಿರಿಯ ಪುತ್ರ ಕೂಡ ಈಗ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ನಿಂಗಾನಿ ಕುಟುಂಬದಲ್ಲಿ ಅರಣ್ಯ ಸೇವೆ ಮೂರನೇ ತಲೆಮಾರಿಗೆ ಮುಂದುವರಿದಿದೆ.
ತಂದೆಯ ಬಲಿದಾನದಿಂದ ಆರಂಭವಾದ ಬದುಕಿನ ಹೋರಾಟವನ್ನು ಸೇವೆಯ ಸಾಧನೆಯಾಗಿ ರೂಪಿಸಿಕೊಂಡ ಎಸ್.ಎಸ್. ನಿಂಗಾನಿ ಅವರ ಪಯಣ ಸರ್ಕಾರಿ ಸೇವೆಯಲ್ಲಿರುವ ಪ್ರತಿಯೊಬ್ಬರಿಗೂ ಸ್ಫೂರ್ತಿಯ ಕಥೆಯಾಗಿ ಉಳಿದಿದೆ.

Total Views 51
RELATED ARTICLES

Most Popular

Recent Comments

KNN City News
Home
E-Paper