
ಬೆಳಗಾವಿ
ಶಿವಮ್ ಅಸೋಸಿಯೇಟ್ಸ್, ಆದಿತ್ಯ ರಾಜ್ ಕ್ಯಾಪಿಟಲ್ ಮತ್ತು ಸಿಟಿ ಇಂಡೆಕ್ಸ್ ಸಂಸ್ಥೆಗಳ ಹೂಡಿಕೆ ವಂಚನೆ ಪ್ರಕರಣಗಳ ಬಗ್ಗೆ ನಮ್ಮ ಚಾನೆಲ್ ಈ ಹಿಂದೆ ಎಕ್ಸ್‌ಪೋಸ್ ವರದಿಗಳನ್ನು ಪ್ರಸಾರ ಮಾಡಿತ್ತು. ಆ ವರದಿಗಳ ನಂತರ ನೂರಾರು ಹೂಡಿಕೆದಾರರು ನಮಗೆ ಕರೆ ಮಾಡಿ, ತಮ್ಮ ಹಣ ಹೇಗೆ ವಾಪಸ್ ಪಡೆಯುವುದು ಎಂದು ಕೇಳುತ್ತಿದ್ದಾರೆ. ಸರಿಯಾದ ಪ್ರಕ್ರಿಯೆ ಗೊತ್ತಿಲ್ಲದೆ ಅನೇಕರು ಒಂದು ಕಚೇರಿಯಿಂದ ಇನ್ನೊಂದಕ್ಕೆ ಅಲೆದಾಡುತ್ತಿದ್ದಾರೆ.
ಈ ವಿಶೇಷ ವರದಿಯಲ್ಲಿ ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆ (KPID ಕಾಯ್ದೆ, 2004) ಅಡಿ ಹಣ ವಾಪಸ್ ಪಡೆಯುವ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸುತ್ತೇವೆ.
KPID ಕಾಯ್ದೆ ಎಂದರೇನು?

ಬಡ್ಡಿ ಅಥವಾ ಲಾಭದ ಆಸೆ ತೋರಿಸಿ ಠೇವಣಿ ಸಂಗ್ರಹಿಸಿ ವಂಚಿಸುವ ಸಂಸ್ಥೆಗಳಿಂದ ಠೇವಣಿದಾರರನ್ನು ರಕ್ಷಿಸಲು ಕರ್ನಾಟಕ ಸರ್ಕಾರ 2004ರಲ್ಲಿ ಈ ಕಾಯ್ದೆ ಜಾರಿಗೊಳಿಸಿತು (2022 ಮತ್ತು 2024ರಲ್ಲಿ ಬಿಗಿಗೊಳಿಸಲಾಗಿದೆ). ವಂಚನೆ ಸಾಬೀತಾದರೆ, ಸಂಸ್ಥೆ ಮತ್ತು ಅದರ ನಿರ್ದೇಶಕರ ಆಸ್ತಿಯನ್ನು ಸರ್ಕಾರ ಜಪ್ತಿ ಮಾಡಿ, ಹರಾಜು ಹಾಕಿ ಬಂದ ಹಣವನ್ನು ಠೇವಣಿದಾರರಿಗೆ ಹಂಚುತ್ತದೆ.


ಹಣ ವಾಪಸ್ ಪ್ರಕ್ರಿಯೆ — 6 ಹಂತಗಳು
ಆಸ್ತಿ ಜಪ್ತಿ — ಸಂಸ್ಥೆ ಮತ್ತು ನಿರ್ದೇಶಕರ ಆಸ್ತಿ ಫ್ರೀಜ್ ಆಗುತ್ತದೆ.
‘ಕಂಪೀಟೆಂಟ್ ಅಥಾರಿಟಿ’ ನೇಮಕ — ಸಹಾಯಕ ಆಯುಕ್ತ ಶ್ರೇಣಿಯ ಅಧಿಕಾರಿ ಪ್ರಕರಣ ನಿರ್ವಹಿಸುತ್ತಾರೆ.


ಸಾರ್ವಜನಿಕ ಸೂಚನೆ — ಪತ್ರಿಕೆ/ಗೆಜೆಟ್/ಆನ್‌ಲೈನ್ ಪೋರ್ಟಲ್ ಮೂಲಕ ಕ್ಲೇಮ್‌ಗೆ ಆಹ್ವಾನ. ಇದೇ ಹೂಡಿಕೆದಾರರಿಗೆ ಅತಿ ಮುಖ್ಯ ಕ್ಷಣ.
ಕ್ಲೇಮ್ ಸಲ್ಲಿಕೆ — ರಸೀದಿ, ಪಾಸ್‌ಬುಕ್, ಒಪ್ಪಂದ ಪತ್ರ ಸಹಿತ ಅರ್ಜಿ (ಸಾಮಾನ್ಯವಾಗಿ ಆನ್‌ಲೈನ್ ಪೋರ್ಟಲ್ ಮೂಲಕ).
ಆಸ್ತಿ ಹರಾಜು — ಕಂಪೀಟೆಂಟ್ ಅಥಾರಿಟಿ ಜಪ್ತಿ ಆಸ್ತಿ ಮಾರಿ ಹಣ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ.
ಸ್ಪೆಷಲ್ ಕೋರ್ಟ್ ಆದೇಶ — ಠೇವಣಿದಾರರ ಪಟ್ಟಿ ಅಂತಿಮಗೊಳಿಸಿ ಪಾವತಿಗೆ ಆದೇಶ (ಅಗತ್ಯವಿದ್ದರೆ ಅನುಪಾತದ ಪ್ರಕಾರ).
ಬೆಳಗಾವಿಯ ಪಾಠ: ಸಂಗೊಳ್ಳಿ ರಾಯಣ್ಣ ಸೊಸೈಟಿ ಪ್ರಕರಣ
“ಕಾಯ್ದೆ ಕೆಲಸ ಮಾಡುತ್ತದೆ — ಆದರೆ ಸರಿಯಾದ ದಾಖಲೆಗಳಿಲ್ಲದೆ ಹಣ ಕೈಗೆ ಸಿಗುವುದು ವರ್ಷಗಟ್ಟಲೆ ವಿಳಂಬವಾಗುತ್ತದೆ.”
2017ರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿ ಬಂದ್ ಆದಾಗ ಸಾವಿರಾರು ಬೆಳಗಾವಿಯ ಜನರು ಉಳಿತಾಯ ಕಳೆದುಕೊಂಡರು. ಆಸ್ತಿ ಜಪ್ತಿ, ಹರಾಜಿನಿಂದ ₹80–90 ಕೋಟಿ ಸಂಗ್ರಹವಾಯಿತು. ಆದರೆ ಬೆಂಗಳೂರಿನ ಕಂಪೀಟೆಂಟ್ ಅಥಾರಿಟಿ ₹20,000ಕ್ಕಿಂತ ಹೆಚ್ಚಿನ ನಗದು ಠೇವಣಿಗೆ ಸಾಕ್ಷ್ಯ ಇಲ್ಲವೆಂದು ಅನೇಕ ಕ್ಲೇಮ್ ತಿರಸ್ಕರಿಸಿತು. ಹೂಡಿಕೆದಾರರು ಹೈಕೋರ್ಟ್‌ನಲ್ಲಿ ಗೆದ್ದರೂ, ಮತ್ತೆ ಹಳೆಯ ದಾಖಲೆಗಳ ಕೇಳಿಕೆಯಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈ ತಿಂಗಳಷ್ಟೇ ವಕೀಲ ಎನ್.ಆರ್. ಲತೂರ್ ನೇತೃತ್ವದಲ್ಲಿ ಹೂಡಿಕೆದಾರರು ಬೆಳಗಾವಿ DC ಕಚೇರಿಗೆ ತೆರಳಿ ಮುಖ್ಯಮಂತ್ರಿಗಳ ಮಧ್ಯಪ್ರವೇಶ ಕೋರಿದ್ದಾರೆ.
ಹೂಡಿಕೆದಾರರಿಗೆ ಸಲಹೆಗಳು
ಠೇವಣಿ ರಸೀದಿ, ಪಾಸ್‌ಬುಕ್, ಒಪ್ಪಂದ ಪತ್ರ, ಬ್ಯಾಂಕ್ ದಾಖಲೆ ಜೋಪಾನವಾಗಿ ಇಟ್ಟುಕೊಳ್ಳಿ.
ಕಂಪೀಟೆಂಟ್ ಅಥಾರಿಟಿಯ ಸಾರ್ವಜನಿಕ ಸೂಚನೆಗಾಗಿ ಗಮನವಿರಲಿ.
ಪೊಲೀಸ್ ಕೇಸ್ ಇದ್ದರೆ ಅಲ್ಲಿಯೂ ದೂರುದಾರರಾಗಿ ನೋಂದಾಯಿಸಿ.
ಕ್ಲೇಮ್ ತಿರಸ್ಕಾರವಾದರೆ ಹೈಕೋರ್ಟ್ ಮೆಟ್ಟಿಲೇರುವ ಆಯ್ಕೆ ಇದೆ.
ಅಧಿಕ ಲಾಭದ ಆಮಿಷದ ಸಂಸ್ಥೆಗಳ ನೋಂದಣಿ, ಪರವಾನಗಿ ಮೊದಲೇ ಪರಿಶೀಲಿಸಿ.
ಶಿವಮ್ ಅಸೋಸಿಯೇಟ್ಸ್, ಆದಿತ್ಯ ರಾಜ್ ಕ್ಯಾಪಿಟಲ್, ಸಿಟಿ ಇಂಡೆಕ್ಸ್ ಅಥವಾ ಇನ್ಯಾವುದೇ ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಹಣ ಸಿಗದೆ ಇದ್ದವರು ನಮ್ಮ ಚಾನೆಲ್‌ಗೆ ಸಂಪರ್ಕಿಸಿ.
