
ಕುಡಿದು ಗಲಾಟೆ ಮಾಡಿದ ಆರೋಪಿಗೆ ಚಿಕ್ಕೋಡಿ ಜೆಎಂಎಫ್ಸಿ ನ್ಯಾಯಾಲಯ ವಿಭಿನ್ನ ಶಿಕ್ಷೆ ವಿಧಿಸಿದೆ.
ಯಕ್ಸಂಬಾ ಪಟ್ಟಣದ ಅನಿಲ ನಿಂಗಪ್ಪ ಪೂಜಾರಿ ಎಂಬಾತ ತನ್ನ ತಪ್ಪನ್ನು ಸ್ವಯಂಪ್ರೇರಿತವಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ನ್ಯಾಯಾಲಯವು 50 ಸಸಿಗಳನ್ನು ನೆಡುವಂತೆ ಆದೇಶಿಸಿದೆ. ಅದರಂತೆ ಚಿಕ್ಕೋಡಿ ನ್ಯಾಯಾಲಯದ ಆವರಣದಲ್ಲಿ 25 ಹಾಗೂ ಸದಲಗಾ ಪೊಲೀಸ್ ಠಾಣೆ ಆವರಣದಲ್ಲಿ 25 ಸಸಿಗಳನ್ನು ನೆಡಲು ಸೂಚಿಸಲಾಗಿದೆ.
ನ್ಯಾಯಾಲಯದ ಆದೇಶದಂತೆ ಅನಿಲ ಪೂಜಾರಿ ತನ್ನ ಪತ್ನಿಯೊಂದಿಗೆ ಸೇರಿ ಎರಡೂ ಆವರಣಗಳಲ್ಲಿ ಒಟ್ಟು 50 ಸಸಿಗಳನ್ನು ನೆಟ್ಟಿದ್ದಾರೆ.
ಅಪರಾಧಕ್ಕೆ ದಂಡ ಅಥವಾ ಜೈಲು ಶಿಕ್ಷೆ ನೀಡುವ ಬದಲು ಪರಿಸರ ಸಂರಕ್ಷಣೆಗೆ ಪೂರಕವಾಗುವ ರೀತಿಯಲ್ಲಿ ಶಿಕ್ಷೆ ವಿಧಿಸಿರುವ ಚಿಕ್ಕೋಡಿ ನ್ಯಾಯಾಲಯದ ತೀರ್ಪು ಸಾರ್ವಜನಿಕರ ಗಮನ ಸೆಳೆದಿದೆ. ‘ತಪ್ಪಿಗೆ ಶಿಕ್ಷೆ, ಪರಿಸರಕ್ಕೆ ಕೊಡುಗೆ’ ಎಂಬ ಸಂದೇಶ ಸಾರುವಂತಿರುವ ಈ ತೀರ್ಪು ಪರಿಸರ ಕಾಳಜಿಯ ದೃಷ್ಟಿಯಿಂದ ವಿಶೇಷವಾಗಿದೆ.
