Monday, November 23, 2026
HomeBelagaviಸಾಹುಕಾರ್ ಮೇಲೆ ಇಡಿ ದಾಳಿ: ಅಥಣಿ ಸಾಹುಕಾರ್ ಹೇಳಿದ್ದೇನು ?

ಸಾಹುಕಾರ್ ಮೇಲೆ ಇಡಿ ದಾಳಿ: ಅಥಣಿ ಸಾಹುಕಾರ್ ಹೇಳಿದ್ದೇನು ?

ಬೆಳಗಾವಿ
ಇಡಿ ದಾಳಿಗಳು ಹೆಚ್ಚಾಗಿ ವಿರೋಧ ಪಕ್ಷದ ನಾಯಕರ ಮೇಲೆಯೇ ನಡೆಯುತ್ತಿವೆ. ಆಡಳಿತ ಪಕ್ಷದ ನಾಯಕರ ಮೇಲೆ ಕಡಿಮೆ ಪ್ರಮಾಣದಲ್ಲಿ ದಾಳಿಗಳು ನಡೆಯುತ್ತಿವೆ ಎಂಬ ಆರೋಪಗಳ ನಡುವೆಯೇ, ‘ನಮ್ಮವರ ಷಡ್ಯಂತ್ರವಿದೆ’ ಎಂಬ ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.
ಭಾನುವಾರ ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಯಾವ ಅರ್ಥದಲ್ಲಿ ಆ ಹೇಳಿಕೆ ನೀಡಿದ್ದಾರೆ ಎಂಬುದು ತಮಗೆ ತಿಳಿದಿಲ್ಲ. ಅವರ ಹೇಳಿಕೆಗೆ ಅವರೇ ಉತ್ತರ ನೀಡಬೇಕು. ನನ್ನನ್ನು ಕೇಳಿದರೆ ಈ ಬಗ್ಗೆ ನಾನೇನು ಹೇಳಲು ಸಾಧ್ಯ ಎಂದು ಸವದಿ ಹೇಳಿದರು.
‘ಬೆಂಗಳೂರಿನ ಜನದಟ್ಟಣೆಯಿಂದ ಟ್ರಾಫಿಕ್, ಮಾಲಿನ್ಯ ಹೆಚ್ಚಳ’
ಶಾಸಕರಿಗೆ ಇಬ್ಬರು ಹೆಂಡತಿಯರು ಇದ್ದಾರೆ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ನಗರ ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ಮಾತು ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.
ಬೆಂಗಳೂರಿಗೆ ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಗೆ ಬರುವ ಹೆಚ್ಚಿನ ಜನರು ನಗರದಲ್ಲಿಯೇ ನೆಲೆಸುತ್ತಿದ್ದಾರೆ. ಇದರಿಂದ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಟ್ರಾಫಿಕ್ ದಟ್ಟಣೆ ಹಾಗೂ ಮಾಲಿನ್ಯವೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆ ಹೇಳಿಕೆ ನೀಡಿದ್ದಾರೆ ಎಂದರು.
ಬಿಜೆಪಿ ನಾಯಕರ ಆಕ್ಷೇಪಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕುಂಬಳಕಾಯಿ ಕಳ್ಳ ಯಾರು ಎಂದರೆ ಹೆಗಲು ಮುಟ್ಟಿಕೊಂಡಂತಾಗಿದೆ. ಯಾರಾದರೂ ತಪ್ಪು ಮಾಡಿದ್ದರೆ ಅವರಿಗೇ ಸಿಟ್ಟು ಬಂದಿದೆ” ಎಂದು ವ್ಯಂಗ್ಯವಾಡಿದರು.
ನಂದಿನಿ ಹಾಲಿನ ದರ ಏರಿಕೆ ಕುರಿತು ಈಗಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಹೊಸ ದರ ನಿಗದಿಯಾಗುವ ಸಾಧ್ಯತೆ ಇದೆ. ಹಾಲು ಒಕ್ಕೂಟಗಳು ಪ್ರತಿ ಲೀಟರ್‌ಗೆ 8 ರೂ. ರಿಂದ 10 ರೂ. ರವರೆಗೆ ದರ ಹೆಚ್ಚಳ ಮಾಡಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಿವೆ. ಈ ವಿಚಾರವನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲೇ ದರ ನಿಗದಿ ಮಾಡುವುದಾಗಿ ತಿಳಿಸಿದ್ದಾರೆ ಎಂದರು.
ಹಾಲಿನ ದರ ನಿಗದಿ ವೇಳೆ ಕೇವಲ ಗ್ರಾಹಕರ ಹಿತವನ್ನಷ್ಟೇ ಅಲ್ಲದೆ, ಹಾಲು ಉತ್ಪಾದಕರು ಹಾಗೂ ಸಂಬಂಧಿಸಿದ ಸಂಘ-ಸಂಸ್ಥೆಗಳ ಹಿತವನ್ನೂ ಗಮನದಲ್ಲಿಟ್ಟುಕೊಳ್ಳಬೇಕಿದೆ. ಎಲ್ಲರ ಹಿತಾಸಕ್ತಿಯನ್ನು ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕಬ್ಬಿನ ದರ ಹೆಚ್ಚಳಕ್ಕೆ ರೈತರಿಂದ ಆಗ್ರಹ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರಕಾರವೇ ಎಫ್‌ಆರ್‌ಪಿ ಹಾಗೂ ಎಂಎಸ್‌ಪಿ ದರ ನಿಗದಿ ಮಾಡುವಾಗ ರೈತರು, ಗ್ರಾಹಕರು ಹಾಗೂ ಸಕ್ಕರೆ ಕಾರ್ಖಾನೆಗಳ ಹಿತವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಸಕ್ಕರೆ ದರ ನಿಗದಿಗೂ ಎರಡು ಮಾದರಿಯ ವ್ಯವಸ್ಥೆ ಜಾರಿಗೆ ತರಬೇಕು. ಸಾಮಾನ್ಯ ಗ್ರಾಹಕರಿಗೆ ಒಂದು ದರ ಹಾಗೂ ಸಾಫ್ಟ್ ಡ್ರಿಂಕ್ ಮತ್ತು ಸ್ವೀಟ್ ಮಾರ್ಟ್‌ಗಳಂತಹ ವಾಣಿಜ್ಯ ಉದ್ದೇಶಕ್ಕೆ ಸಕ್ಕರೆ ಬಳಸುವವರಿಗೆ ಮತ್ತೊಂದು ದರ ನಿಗದಿಪಡಿಸಬೇಕು ಎಂದರು.
ಕಮರ್ಷಿಯಲ್ ಹಾಗೂ ಡೊಮೆಸ್ಟಿಕ್ ಗ್ಯಾಸ್‌ಗೆ ಪ್ರತ್ಯೇಕ ದರ ಇರುವ ಮಾದರಿಯಲ್ಲೇ ಸಕ್ಕರೆಗೂ ಎರಡು ರೀತಿಯ ದರ ನಿಗದಿಪಡಿಸಿದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ಕುರಿತು ಕೇಂದ್ರ ಸರಕಾರ ಗಮನಹರಿಸಬೇಕು ಎಂದು ಆಗ್ರಹಿಸಿದರು.

Total Views 257
RELATED ARTICLES

Most Popular

Recent Comments

KNN City News
Home
E-Paper