Monday, November 23, 2026
HomeBelagaviಪಾಲಿಕೆಯಲ್ಲಿ ಮೈಕ್ ಕಿರಿಕಿರಿ: ವಿಪಕ್ಷ ಸದಸ್ಯರಿಂದಲೇ ಸಭಾಂಗಣಕ್ಕೆ ಮೈಕ್

ಪಾಲಿಕೆಯಲ್ಲಿ ಮೈಕ್ ಕಿರಿಕಿರಿ: ವಿಪಕ್ಷ ಸದಸ್ಯರಿಂದಲೇ ಸಭಾಂಗಣಕ್ಕೆ ಮೈಕ್

ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಮೈಕ್ ಕಿರಿಕಿರಿ ಮುಂದುವರಿದಿದ್ದರಿಂದ ಬೇಸತ್ತ ವಿಪಕ್ಷ ಸದಸ್ಯರು ಕೊನೆಗೆ ಸ್ವತಃ ಮೈಕ್ ತಂದು ಸಭಾಂಗಣದಲ್ಲಿ ಅಳವಡಿಸಿದ ಘಟನೆ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು. ವಿಪಕ್ಷ ಸದಸ್ಯರ ಈ ನಡೆ ಆಡಳಿತಾರೂಢ ಬಿಜೆಪಿ ಸದಸ್ಯರಿಗೆ ಮುಜುಗರ ಉಂಟುಮಾಡಿತು.
ಮೇಯರ್ ಪ್ರೀತಿ ಕಾಮಕರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ಆರಂಭದಿಂದಲೇ ಮೈಕ್ ಸರಿಯಾಗಿ ಕಾರ್ಯನಿರ್ವಹಿಸದೆ ಸದಸ್ಯರು ಪರದಾಡುವಂತಾಯಿತು. ಸಭೆಯಲ್ಲಿ ಮಾತನಾಡಬೇಕಾದ ಸದಸ್ಯರಿಗೆ ಧ್ವನಿ ಸ್ಪಷ್ಟವಾಗಿ ಕೇಳಿಸದ ಹಿನ್ನೆಲೆಯಲ್ಲಿ ಹಲವು ಬಾರಿ ಮೈಕ್ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಆದರೆ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ವಿಪಕ್ಷ ಸದಸ್ಯರು ಸ್ವತಃ ಮೈಕ್ ತಂದು ಸಭಾಂಗಣದಲ್ಲಿ ಅಳವಡಿಸಿಕೊಂಡರು.
ವಿಪಕ್ಷ ಸದಸ್ಯರು ಮೈಕ್ ತಂದು ಬಳಸಲಾರಂಭಿಸುತ್ತಿದ್ದಂತೆ ಸಭೆಯಲ್ಲಿ ಮಾತನಾಡುತ್ತಿದ್ದ ಬಿಜೆಪಿ ಸದಸ್ಯ ರವಿ ದೋತ್ರೆ, “ಪಾಲಿಕೆಯಲ್ಲಿ ಮೈಕ್ ಹಾಗೂ ಎಸಿ ಕಿರಿಕಿರಿ ಉಂಟಾಗಿರುವುದು ನಮಗೂ ಮುಜುಗರದ ಸಂಗತಿಯಾಗಿದೆ. ವಿಪಕ್ಷ ಸದಸ್ಯರೇ ಮೈಕ್ ವ್ಯವಸ್ಥೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿರುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆಯ ಕೌನ್ಸಿಲ್ ಸಭಾಂಗಣದ ಅವ್ಯವಸ್ಥೆಯ ವಿರುದ್ಧವೂ ರವಿ ದೋತ್ರೆ ಆಕ್ರೋಶ ವ್ಯಕ್ತಪಡಿಸಿದರು. “ಸಭಾಂಗಣದಲ್ಲಿ ಇಲಿಗಳು ಓಡಾಡುತ್ತಿವೆ. ಪಾಲಿಕೆಯಂತಹ ಪ್ರಮುಖ ಆಡಳಿತ ವ್ಯವಸ್ಥೆಯ ಸಭಾಂಗಣದಲ್ಲೇ ಇಂತಹ ಪರಿಸ್ಥಿತಿ ಇರುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಇದೇ ವೇಳೆ ಬಿಜೆಪಿ ಸದಸ್ಯ ಸಂದೀಪ್ ಜೀರಗಿಹಾಳ ಮಾತನಾಡಿ, “ಜನರು ಪಾಲಿಕೆಯ ಆಡಳಿತ ವ್ಯವಸ್ಥೆಯನ್ನು ಅನುಮಾನದಿಂದ ನೋಡುವಂತಾಗಿದೆ. ಅಧಿಕಾರಿಗಳ ದರ್ಪದ ಕಾರಣದಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸಭಾಂಗಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಮೈಕ್ ವ್ಯವಸ್ಥೆಯ ದೋಷ, ಎಸಿ-ಫ್ಯಾನ್ ಸಮಸ್ಯೆ ಹಾಗೂ ಸ್ವಚ್ಛತೆಯ ಕೊರತೆ ಕುರಿತು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರ ಸಮಸ್ಯೆಗಳನ್ನು ಚರ್ಚಿಸಬೇಕಾದ ಕೌನ್ಸಿಲ್ ಸಭೆಯಲ್ಲೇ ಸದಸ್ಯರು ಮೂಲಭೂತ ಸೌಲಭ್ಯಗಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿರುವುದು ಚರ್ಚೆಗೆ ಗ್ರಾಸವಾಯಿತು.
ಪಾಲಿಕೆ ಸಭಾಂಗಣದ ನಿರ್ವಹಣೆಯ ಬಗ್ಗೆ ಅಧಿಕಾರಿಗಳು ತಕ್ಷಣ ಗಮನಹರಿಸಿ, ಮೈಕ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ಸಭೆಗಳಲ್ಲಿಯೂ ಇದೇ ರೀತಿಯ ಸಮಸ್ಯೆಗಳು ಮುಂದುವರಿಯುವ ಸಾಧ್ಯತೆ ಇದೆ ಎಂದು ಸದಸ್ಯರು ಎಚ್ಚರಿಸಿದರು.

 

Total Views 42
RELATED ARTICLES

Most Popular

Recent Comments

KNN City News
Home
E-Paper