
ಬೆಳಗಾವಿ
ಕಬ್ಬು ಸಾಗಿಸುವ ಟ್ರ್ಯಾಕ್ಟರ್ಗಳು ಹಾಗೂ ಲಾರಿಗಳಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಹನ ಮಾಲೀಕರು ಮತ್ತು ಚಾಲಕರು ಕಡ್ಡಾಯವಾಗಿ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಇದನ್ನು ಸಕ್ಕರೆ ಕಾರ್ಖಾನೆಯವರು ನಿಗಾವಹಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳುಗಳಲ್ಲಿ ಚಳಿಗಾಲದ ಕಾರಣ ಮಂಜು ಹೆಚ್ಚಾಗಿ ರಸ್ತೆಯಲ್ಲಿ ವಾಹನಗಳ ಗೋಚರತೆ ಕಡಿಮೆಯಾಗುತ್ತದೆ. ಇದರಿಂದ ಅಪಘಾತಗಳ ಸಂಭವ ಹೆಚ್ಚಾಗುವ ಸಾಧ್ಯತೆ ಇದೆ. ಕಬ್ಬು ಸಾಗಿಸುವ ಟ್ರ್ಯಾಕ್ಟರ್ಗಳು ಸೂಕ್ತ ಇಂಡಿಕೇಟರ್ಗಳಿಲ್ಲದೆ ಸಂಚರಿಸುವುದು ಹಾಗೂ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದ ಅವರು, ಪ್ರತಿಯೊಬ್ಬ ಟ್ರ್ಯಾಕ್ಟರ್ ಹಾಗೂ ಲಾರಿ ಮಾಲೀಕರು ತಮ್ಮ ವಾಹನಗಳಿಗೆ ಕಡ್ಡಾಯವಾಗಿ ಉತ್ತಮ ಗುಣಮಟ್ಟದ ರಿಫ್ಲೆಕ್ಟರ್ಗಳು ಮತ್ತು ರಿಫ್ಲೆಕ್ಟರ್ ಸ್ಟ್ರಿಪ್ಸ್ ಅಳವಡಿಸಬೇಕು. ವಾಹನಗಳ ಇಂಡಿಕೇಟರ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು. ಚಾಲಕರ ಬಳಿ ಮಾನ್ಯ ಡ್ರೈವಿಂಗ್ ಲೈಸೆನ್ಸ್ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಪೊಲೀಸ್ ಇಲಾಖೆಯಿಂದ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ, ವಾಹನಗಳ ತಪಾಸಣೆ ನಡೆಸಲಾಗುವುದು. ಕುಡಿದು ವಾಹನ ಚಲಾಯಿಸುವವರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಪಘಾತಗಳನ್ನು ಶೂನ್ಯಕ್ಕೆ ತರುವ ಉದ್ದೇಶದಿಂದ ಪೊಲೀಸ್ ಸಿಬ್ಬಂದಿ ದಿನದ 24 ಗಂಟೆಯೂ ನಿರಂತರ ತಪಾಸಣೆ ನಡೆಸಲಿದ್ದಾರೆ ಎಂದರು.
ಟ್ರ್ಯಾಕ್ಟರ್ಗಳಲ್ಲಿ ಅತಿಯಾದ ಶಬ್ದದ ಸೌಂಡ್ ಸಿಸ್ಟಮ್ ಅಳವಡಿಸಿಕೊಂಡು ಗ್ರಾಮಗಳಲ್ಲಿ ಸಂಚರಿಸುವುದನ್ನು ಸಹಿಸಲಾಗುವುದಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಜೋರಾಗಿ ಧ್ವನಿವರ್ಧಕಗಳನ್ನು ಬಳಸಿದರೆ ಸೌಂಡ್ ಸಿಸ್ಟಮ್ ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುವುದು. ಕಬ್ಬು ಕಟಾವು ಋತುವಿನಲ್ಲಿ ವಾಹನ ಮಾಲೀಕರು ಸ್ವಯಂಪ್ರೇರಿತವಾಗಿ ಸೌಂಡ್ ಸಿಸ್ಟಮ್ ತೆಗೆದು ಇಡುವುದು ಸೂಕ್ತ ಎಂದರು.
ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಶಬ್ದ ಮಾಲಿನ್ಯ ಮಾಡಬಾರದು. ನಿಯಮ ಉಲ್ಲಂಘಿಸಿ ಜೋರಾಗಿ ಧ್ವನಿವರ್ಧಕ ಬಳಸಿದರೆ ಪ್ರಕರಣ ದಾಖಲಿಸಲಾಗುವುದು ಎಂದರು.
ವಾಹನ ಮಾಲೀಕರು ಮತ್ತು ಚಾಲಕರು ತಮ್ಮ ಜವಾಬ್ದಾರಿಯನ್ನು ಅರಿತು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕರ ಸುರಕ್ಷತೆಯೇ ಪೊಲೀಸ್ ಇಲಾಖೆಯ ಮೊದಲ ಆದ್ಯತೆಯಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
