
ಬೆಳಗಾವಿ: ದೇಶದಾದ್ಯಂತ ಸದ್ದು ಮಾಡುತ್ತಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಯಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯಿಂದ ಹಲವು ಮಹಿಳೆಯರು ಸ್ವಾವಲಂಬಿ ಜೀವನದತ್ತ ಮುಖ ಮಾಡಿದ್ದಾರೆ. ಈಗಾಗಲೇ ಹೋಳಿಗೆ ಊಟ , ಗ್ರಂಥಾಲಯ, ದ್ವಿಚಕ್ರ ವಾಹನ, ಸ್ಟೇಷನರಿ ಅಂಗಡಿ ಸೇರಿದಂತೆ ಇನ್ನಿತರ ಕಾರ್ಯಗಳ ಮೂಲಕ ಸದ್ಬಳಕೆ ಮಾಡಿಕೊಂಡಿದ್ದಾರೆ. ಈದೀಗ ಜಮೀನಿನಲ್ಲಿ ಕೊಳವೆ ಬಾವಿ ಕೊರಿಸಿ ಜೀವನ ಕಟ್ಟಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ದಾಪುಗಾಲು ಹಾಕಿದ್ದಾರೆ.
ಈ ಹಿನ್ನಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಯ್ದ ಗೃಹಲಕ್ಷ್ಮೀಯರಿಗೆ ವಿಧಾನ ಸೌಧ ವೀಕ್ಷಣೆಗೆ ಕರೆದುಕೊಂಡು ಹೋಗಲಿದ್ದಾರೆ.
ಡಿ.18ರಂದು ಬೆಳಿಗ್ಗೆ 10ಗಂಟೆಗೆ ಸಚಿವೆ ಹೆಬ್ಬಾಳಕರ ಗೃಹ ಕಚೇರಿಯಿಂದ ಟಿಟಿ ವಾಹನದ ಮೂಲಕ ಸುವರ್ಣ ವಿಧಾನ ಸೌಧಕ್ಕೆ ಕರೆದುಕೊಂಡು ಹೋಗಲಿದ್ದಾರೆ. ವಿಶೇಷವೆಂದರೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಸಹ ಅವರೊಂದಿಗೆ ವಾಹನದಲ್ಲಿ ಪ್ರಯಾಣಿಸಲಿದ್ದಾರೆ. ಸೌಧದಲ್ಲಿ ಅವಕಾಶ ಸಿಕ್ಕರೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಿದ್ದಾರೆ.
