Monday, November 23, 2026
HomeKoppalಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳ : ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕು- ಶಾಸಕ...

ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳ : ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕು- ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕನ್ನಡಮ್ಮ ಸುದ್ದಿ-ಕೊಪ್ಪಳ: ಇತ್ತಿಚೆಗೆ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ರೈತರು ಸಾವಯವ ಬೆಳೆಗಳನ್ನು ಬೆಳೆಯಲು ಒತ್ತು ನೀಡಬೇಕು ಮತ್ತು ಇದಕ್ಕೆ ಕೃಷಿ ಇಲಾಖೆಯವರು ಪ್ರೋತ್ಸಾಹ ನೀಡಬೇಕೆಂದು ಕೊಪ್ಪಳ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ಜಿಲ್ಲಾಡಳಿತ. ಜಿಲ್ಲಾ ಪಂಚಾಯತ. ಕೃಷಿ ಇಲಾಖೆ ಸಹಯೋಗದಲ್ಲಿ  ನಗರದ ಮಧುಶ್ರೀ ಗಾರ್ಡನಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಹಿರಿಯರು ಸಿರಿಧಾನ್ಯಗಳನ್ನು ಸೇವಿಸುತ್ತಿರುವುದರಿಂದಲೆ ಅವರು  80 ರಿಂದ  90 ವರ್ಷಗಳ ಕಾಲ  ಬದುಕುತ್ತಿದ್ದರು. ಆದರೆ ಇಂದು ನಾವು ಹೆಚ್ಚಿನ ಇಳುವರಿ ಪಡೆಯಲು ಶೇ. 60 ಕ್ಕಿಂತಲೂ ಹೆಚ್ಚು ರಾಸಾಯನಿಕ ಗೊಬ್ಬರವನ್ನು ನಮ್ಮ ಹೊಲಗಳಿಗೆ ಹಾಕುತ್ತಿದ್ದೆವೆ. ಇದರಿಂದ ನಮಗೆ ಬಿ.ಪಿ ಮತ್ತು ಶುಗರ್ ಸೇರಿದಂತೆ ಹಲವಾರು ಕಾಯಿಲೆಗಳು ಬರುವದರ ಜೊತೆಗೆ ನಮ್ಮ ಜೀವನಾಂಶವು ಕಡಿಮೆಯಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಮಾತನಾಡಿ ಜಗತ್ತು ಇಂದು ಸಿರಿಧಾನ್ಯಗಳ ಕಡೆಗೆ ದಾಪುಗಾಲು ಹಾಕುತ್ತಿದೆ. ಇವುಗಳಿಂದ ಬಿ.ಪಿ. ಶುಗರ್. ಕ್ಯಾನ್ಸರ್ ನಂತಹ ಹಲವಾರು ಕಾಯಿಲೆಗಳು ವಾಸಿಮಾಡುವ ಶಕ್ತಿ ಅವುಗಳಿಗಿದೆ. ನಮ್ಮ ಹಿಂದಿನ ಆಹಾರ ಪದ್ದತಿ ಮತ್ತೆ ಮರಳಿ ಬರುತ್ತಿದೆ. ಸಿರಿಧಾನ್ಯ ಬೆಳೆಗಳಾದ ಸಜ್ಜೆ. ನವಣೆ. ಬರಗು ಸೇರಿದಂತೆ ಇತರೆ ಆಹಾರ ಸೇವನೆಯಿಂದ ನಾವು ಉತ್ತಮ ಆರೋಗ್ಯವಂತರಾಗಿರುತ್ತೇವೆ. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು ಎಂದು ಹೇಳಿದರು. ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಮಾತನಾಡಿ, ಕೃಷಿ ಇಲಾಖೆಯು ಸಿರಿಧಾನ್ಯ ಮೇಳ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾನು ರೈತನ ಮಗ ಆಗಿರುವುದರಿಂದ ರೈತರ ಕಷ್ಟ ನನಗೂ ಗೊತ್ತಿದೆ. ರೈತ ನಮ್ಮ ಅನ್ನದಾತ ಅವನಿಲ್ಲದಿದ್ದರೆ ನಮ್ಮ ಜೀವನ ಇಲ್ಲ. ರೈತರಿಗೆ ಕೃಷಿಯ ಬಗ್ಗೆ ಮಾಹಿತಿ ನೀಡುವ ಹಲವಾರು ಕಾರ್ಯಕ್ರಮಗಳನ್ನು ತಮ್ಮ ಇಲಾಖೆಯಿಂದ ಆಯೋಜನೆ ಮಾಡಬೇಕೆಂದು ಹೇಳಿದರು.

ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕವಿತಾ ಹುಳ್ಳಿಕಾಶಿ ಅವರು ವಿಶೇಷ ಉಪನ್ಯಾಸ ನೀಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಎಲ್ ಅರಸಿದ್ದಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಪಶು ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ.ಮಲ್ಲಯ್ಯ, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ರಾಘವೇಂದ್ರ ಎಲಿಗಾರ, ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ತಿಮ್ಮಣ್ಣ ಚೌಡಿ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಸಣ್ಣ ಹನುಮಪ್ಪ್ಪ ಹುಳ್ಳಿ, ಇತರರು ಇದ್ದರು. ಕೈಪಿಡಿ ಬಿಡುಗಡೆ: `ಸಿರಿಧಾನ್ಯಗಳ ಅಧಿಕ ಉತ್ಪಾದನೆಗೆ ಸುಧಾರಿತ ತಾಂತ್ರಿಕತೆಗಳು ಹಾಗೂ ಮೌಲ್ಯವರ್ಧನೆ’ ಕುರಿತ ಕೃಷಿ ಇಲಾಖೆಯಿಂದ ಸಿದ್ದಪಡಿಸಲಾದ ಕೈಪಿಡಿಯನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಗಮನ ಸೆಳೆದ ಪ್ರದರ್ಶನ ಮಳಿಗೆಗಳು: ಸಾವಯವ ಮತ್ತು ಸಿರಿಧಾನ್ಯ ಮೇಳ ಕಾರ್ಯಕ್ರಮದ ನಿಮಿತ್ತ ಸಿರಿಧಾನ್ಯಗಳು ಮತ್ತು ಅವುಗಳಿಂದ ತಯಾರಿಸಲ್ಪಟ್ಟ ಖಾದ್ಯಗಳು ಹಾಗೂ ಸಾವಯವ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಸಾರ್ವಜನಿಕರ ಗಮನ ಸೆಳೆದವು.

Total Views 14
RELATED ARTICLES

Most Popular

Recent Comments

KNN City News
Home
E-Paper