
ಬೆಳಗಾವಿ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮೊದಲು ಅವರ ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬಗ್ಗೆ ಗೌರವ ಬೆಳೆಸಿಕೊಳ್ಳಲಿ. ಕನಿಷ್ಠ ಪರಿಜ್ಞಾನ ಇಲ್ಲದ ವ್ಯಕ್ತಿಯ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಶಾಸಕ ಪ್ರದೀಪ್ ಈಶ್ವರ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಗಾಂಧಿಜಿ ಅವರಿಗೆ ನಾಥೂರಾಮ್ ಗೂಡ್ಸೆ ಒಂದು ಗುಂಡು ಹಾಕಿದರೆ ಎರಡೂ ಗುಂಡು ಹಾಕಿದ್ದು ನೆಹರೂ ಅವರು ಎಂದು ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದರು.
ನಕಲಿ ಗಾಂಧಿಗಳ ಸಮಾವೇಶ ಎಂಬ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಲ್ಹಾದ ಜೋಶಿ ಬಹಳ ಅಸಲಿ ಇದ್ದಾರೆ. ಸಾಕ್ಷಿಗಳನ್ನು ಸಂಗ್ರಹಿಸಿ ಬಹಳ ಗುಡ್ಡೆಗಳನ್ನು ಹಾಕಿದ್ದಾರೆ. ಪ್ರಲ್ಹಾದ ಜೋಶಿ ಅವರಿಗೂ ಗೊತ್ತಾಗಿದೆ. ಇನ್ನೊಂದು ಹತ್ತು ವರ್ಷದಲ್ಲಿ ಬಿಜೆಪಿ ಸರಕಾರ ಬರಲ್ಲ ಎನ್ನುವುದು. ಅವರು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬರಬೇಕು ಎಂದಿದ್ದರು. ಆದರೆ ಯಡಿಯೂರಪ್ಪನವರ ಬಣ ಯತ್ನಾಳ ಬಣ ಇವರ ಒಳಜಗಳದಲ್ಲಿಯೇ ಕಳೆದ ಬಾರಿ ಚುನಾವಣೆಯಲ್ಲಿ ಬಂದ ನಂಬರ್ ಗಿಂತ ಈ ಭಾರಿ ಕಡಿಮೆ ಬರುತ್ತದೆ ಎಂದರು.
ಗಾಂಧಿಯವರಿಗೆ ಬೆಳಗಾವಿ ಹಾಗೂ ಚಿಕ್ಕಬಳ್ಳಾಪುರಗೆ ಅವಿನಾಭಾವ ಸಂಬಂಧ ಇದೆ. ಮಹಾತ್ಮ ಗಾಂಧಿಯವರು ಬೆಳಗಾವಿಯಲ್ಲಿ ಅಧಿವೇಶನ ನಡೆಸುವಾಗ ಚಿಕ್ಕಬಳ್ಳಾಪುರದ ನಂದಿ ಬೆಟ್ಟಕ್ಕೆ ಬಂದು ತೆರಳಿದ್ದರು. ಹೀಗಾಗಿ ನಮಗೆ ಶಕ್ತಿ ಬಂದಿದೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಿರುವುದು ಹೆಮ್ಮೆ ಸಂಗತಿ ಎಂದರು.
