ಕನ್ನಡಮ್ಮ ಸುದ್ದಿ-ಕೊಪ್ಪಳ : ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ತೊಗಲುಗೊಂಬೆ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ 2025ರ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದಲ್ಲಿ 1929ರಲ್ಲಿ ಜನಿಸಿದ ಭೀಮವ್ವ ಶಿಳ್ಳೆಕ್ಯಾತರ, ತೊಗಲುಗೊಂಬೆಯಾಟದಲ್ಲಿ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದಿದ್ದಾರೆ. ತಮ್ಮ 14ನೇ ವಯಸ್ಸಿನಿಂದ ಇಲ್ಲಿಯವರೆಗೂ ತೊಗಲು ಗೊಂಬೆಯಾಟವನ್ನು ಕುಲಕಸುಬಾಗಿ ಮಾಡುತ್ತಾ ಕಲೆಯಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ.
ಶಿಳ್ಳೆಕ್ಯಾತರ ಸಮುದಾಯದ ಭೀಮವ್ವ 1929ರಲ್ಲಿ ಜನಿಸಿದ್ದು, ಓದು-ಬರಹ ಬಲ್ಲವರಲ್ಲ. ಇವರ ಮಗ ಕೇಶಪ್ಪ ಶಿಳ್ಳೆಕ್ಯಾತರ ಸಹ ಪ್ರಾಥಮಿಕ ಶಿಕ್ಷಣಕ್ಕೆ ಅಭ್ಯಾಸ ಮೊಟಕುಗೊಳಿಸಿದವರು. ಆದರೆ, ಇವರ ಕುಟುಂಬದವರೆಲ್ಲರೂ ತೊಗಲುಗೊಂಬೆ ಆಟದಲ್ಲಿ ಪರಿಣಿತರು. ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆಯೂ ಗ್ರಾಮೀಣ ಕಲೆ ಉಳಿಸಿಕೊಂಡು ಪೋಷಿಸುತ್ತಿದೆ.
14ನೇ ವಯಸ್ಸಿಗೆ ಗೊಂಬೆಯಾಟ ಅಡಿಸಲು ಶುರು ಮಾಡಿದ ಭೀಮವ್ವ, ನಾಡಿನ ಅನೇಕ ಸಾಂಸ್ಕೃತಿಕ ಉತ್ಸವ, ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. 90ರ ದಶಕದಲ್ಲೇ ವಿದೇಶಗಳಲ್ಲಿ ಕಲೆ ಪ್ರದರ್ಶಿಸಿದ್ದಾರೆ. ಅಮೇರಿಕ, ಪ್ಯಾರಿಸ್, ಇಟಲಿ, ಇರಾನ್, ಇರಾಕ್, ಸ್ವಿಟ್ಜರ್ಲೆಂಡ್, ಹಾಲೆಂಡ್ ಮುಂತಾದ ದೇಶಗಳಲ್ಲಿ ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳನ್ನು ಹಾಗೂ ಪ್ರಸ್ತುತ ವಿದ್ಯಮಾನಗಳನ್ನು ತೊಗಲುಗೊಂಬೆಯಾಟದ ಮೂಲಕ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದಿದ್ದಾರೆ.
