
ರಾಮದುರ್ಗ
ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವದ ಸವಿ ನನವಿನಲ್ಲಿ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ ನೀಡುತ್ತಿರುವ ಪಂಚಾಚಾರ್ಯ ಶ್ರೀ ಪ್ರಶಸ್ತಿ ಈ ವರ್ಷ ಬನ್ನೂರು ಚಿಕ್ಕಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ನೀಡಿ ಗೌರವಿಸುತ್ತಿರುವುದು ಒಬ್ಬ ಸಾತ್ವಿಕ, ತಾತ್ವಿಕ ಮತ್ತು ಆಚಾರವಂತ ಸ್ವಾಮೀಜಿಗಳಿಗೆ ನೀಡುವುದರ ಮೂಲಕ ಹುಕ್ಕೇರಿ ಶ್ರೀಗಳು ಹಿರಿತನಕ್ಕೆ ಕೊಟ್ಟ ಗೌರವವಾಗಿದೆ ಎಂದು ಕಟಕೋಳ ಎಂ ಚಂದರಗಿ ಹಿರೇಮಠದ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ರಾಮದುರ್ಗ ತಾಲೂಕಿನ ಬನ್ನೂರು ಚಿಕ್ಕಮಠದಲ್ಲಿ ಜರುಗಿದ ಪಂಚಾಚಾರ್ಯ ಶ್ರೀ ಪ್ರಶಸ್ತಿ ಸಮಾರಂಭದ ದಿವ್ಯ ಸಾನಿದ್ಯ ವಹಿಸಿಕೊಂಡು ಮಾತನಾಡಿದರು. ಹುಕ್ಕೇರಿ ಶ್ರೀಗಳು ಪ್ರತಿ ವರ್ಷ ಶ್ರೀ ಪಂಚಾಚಾರ್ಯ ಪ್ರಶಸ್ತಿಯನ್ನು ಹಿರಿಯ ಸ್ವಾಮೀಜಿಗೆ ನೀಡುತ್ತ ಬಂದಿರುವುದು ಸಂತೋಷದ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಗೋಜಿಕೊಪ್ಪ ಹಿರೇಮಠದ ಶ್ರೀ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಹಿರಿಯರು ಇದ್ದಲ್ಲಿಯೇ ಹೋಗಿ ಗೌರವಿಸುವಂಥ ಸಂಪ್ರದಾಯವನ್ನು ಹಾಕಿರುವ ದೇಶದ ಮೊದಲ ಮಠ ಎಂದರೆ ಅದು ಹುಕ್ಕೇರಿ ಹಿರೇಮಠ ಎಂದು ಹೇಳಬಹದು. ಇವತ್ತು ಬನ್ನೂರು ಶ್ರೀಗಳಿಗೆ ಅವರ ಶ್ರೀಮಠಕ್ಕೆ ಬಂದು ಎಲ್ಲಾ ಕಾರ್ಯಕ್ರಮದ ವ್ಯವಸ್ಥೆಯನ್ನು ಮಾಡಿ ಪಂಚಾಚಾರ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅವರಲ್ಲಿರುವ ಪಂಚಪೀಠಗಳ ಬಗ್ಗೆ ಇರುವ ಗೌರವ ಎಂಥದ್ದು ಎಂದು ತಿಳಿದು ಬರುತ್ತದೆ ಎಂದರು.
ಪ್ರಶಸ್ತಿಯನ್ನು ಸ್ವೀಕರಿಸಿದ ಬನ್ನೂರು ಚಿಕ್ಕಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಂಚಾಚಾರ್ಯ ಶ್ರೀ ಪ್ರಶಸ್ತಿ ಇವತ್ತು ನಮಗೆ ದೊರಕಿರುವುದು ಅತೀವ ಸಂತೋಷವಾಗಿದೆ. ಬನ್ನೂರು ಚಿಕ್ಕಮಠ ಎಂದರೆ ಅದು ಬಹಳಷ್ಟು ಪುರಾತನ ಮಠ. ಇನ್ನೂ ಹೆಮ್ಮೆಯಿಂದ ಹೇಳಬೇಕೆಂದರೆ ಹಿಂದಿನ ಶ್ರೀಶೈಲ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯನ್ನು ಶ್ರೀಶೈಲ ಪೀಠಕ್ಕೆ ನೀಡಿದ ಕೀರ್ತಿ ಬನ್ನೂರು ಚಿಕ್ಕಮಠಕ್ಕೆ ಸಲ್ಲುತ್ತದೆ. ಹುಕ್ಕೇರಿ ಶ್ರೀಗಳು ಪಂಚಪೀಠದ ಸೇನಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕೊಟ್ಟಿರುವ ಈ ಪ್ರಶಸ್ತಿ ಇಡೀ ನಮ್ಮ ಭಕ್ತರಿಗೆ ಕೊಟ್ಟಂತಾಗಿದೆ ಎಂದರು.
ಪಂಚಾಚಾರ್ಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಯುಗಾದಿಯ ಪಾಂಡ್ಯದ ದಿನ ಎಲ್ಲರೂ ಕೂಡ ತಮ್ಮ ತಮ್ಮ ಮನೆ, ಮಠಗಳಲ್ಲಿ ಶ್ರೀ ಪಂಚಾಚಾರ್ಯ ಯುಗಮಾನೋತ್ಸವದ ದಿನವನ್ನು ಮಾಡಬೇಕು. ಕಾರಣ ಭಾರತೀಯ ಪರಂಪರೆಯಲ್ಲಿ ಪಂಚಪೀಠಗಳು ತುಂಬಾ ಪುರಾತನವಾದವು ಎಂದ ಅವರು, ಬನ್ನೂರು ಶ್ರೀಗಳು ಬಹಳಷ್ಟು ಸಾತ್ವಿಕ ಗುರುಗಳು. ಇವತ್ತು ಪಂಚಾಚಾರ್ಯ ಶ್ರೀ ಪ್ರಶಸ್ತಿಯನ್ನು ಅವರಿಗೆ ಅರ್ಪಿಸುವ ಮೂಲಕ ನಾವು ಸಂತೋಷ ಪಟ್ಟಿದ್ದೇವೆ ಎಂದರು.
ಕಟಕೋಳ ಎಂ ಚಂದರಗಿಯ ಉತ್ತಾರಾಧಿಕಾರಿ ಶ್ರೀ ರೇಣುಕ ಗಡದೇಶ್ವರ ದೇವರು ಉಪಸ್ಥಿತರಿದ್ದರು.
ಹುಕ್ಕೇರಿ ಹಿರೇಮಠದ ಗುರುಕುಲದ ಶ್ರೀ ಕಾರ್ತಿಕ ಶಾಸ್ತ್ರೀಗಳು, ಶ್ರೀ ಮಲ್ಲಿಕಾರ್ಜುನ ಶಾಸ್ತ್ರೀಗಳು ವೇದ ಘೋಷವನ್ನು ಮಾಡಿದರು. ಕಾವೇರಿ ರೋಗಿ ಸಂಗಡಿಗರಿಂದ ಪ್ರಾರ್ಥನೆ ಜರುಗಿತು. ಪ್ರಾಸ್ತಾವಿಕವಾಗಿ ಮಹಾಂತೇಶ ವಾಲಿ, ಸುರೇಶ ಹಿರೇಮಠ, ಲೋಕಾಪುರೆ ಮಾತನಾಡಿದರು.
ಮಹಾಂತೇಶ ವಾಲಿ ಅವರು, ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
