Thursday, November 19, 2026
HomeHubli-Dharwadಹುಬ್ಬಳ್ಳಿಯ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಗೆ ದಶಕದ ಸಂಭ್ರಮ: ರೋಬೋಟಿಕ್ ಶಸ್ತ್ರಚಿಕಿತ್ಸೆ ಮತ್ತು ಆಸ್ಪತ್ರೆ ನವೀಕರಣದ...

ಹುಬ್ಬಳ್ಳಿಯ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಗೆ ದಶಕದ ಸಂಭ್ರಮ: ರೋಬೋಟಿಕ್ ಶಸ್ತ್ರಚಿಕಿತ್ಸೆ ಮತ್ತು ಆಸ್ಪತ್ರೆ ನವೀಕರಣದ ಮಹತ್ವದ ಘೋಷಣೆ

 

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯು ಹತ್ತು ವರ್ಷಗಳ ಯಶಸ್ವಿ ಸೇವೆಯನ್ನು ಪೂರೈಸಿದೆ. ಈ ದಶಮಾನೋತ್ಸವದ ಸಂದರ್ಭದಲ್ಲಿ, ಆಸ್ಪತ್ರೆಯು ಅತ್ಯಾಧುನಿಕ ‘ರೋಬೋಟಿಕ್ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ’ಯನ್ನು (Robotic Cataract Surgery) ಪರಿಚಯಿಸುತ್ತಿದ್ದು, ಆಸ್ಪತ್ರೆಯ ಕಟ್ಟಡವನ್ನು ಸಂಪೂರ್ಣವಾಗಿ ನವೀಕರಿಸುವ ಮಹತ್ವದ ಯೋಜನೆಯನ್ನು ಪ್ರಕಟಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಶ್ರೀಕೃಷ್ಣ ನಾಡಗೌಡ, “ಕಳೆದ 10 ವರ್ಷಗಳಲ್ಲಿ ನಮ್ಮ ಆಸ್ಪತ್ರೆಯಲ್ಲಿ ಸುಮಾರು 1.5 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಮತ್ತು 25,000ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಇದರಲ್ಲಿ ಶೇ. 80ರಷ್ಟು ಶಸ್ತ್ರಚಿಕಿತ್ಸೆಗಳು ಕಣ್ಣಿನ ಪೊರೆಗೆ (Cataract) ಸಂಬಂಧಿಸಿದ್ದಾಗಿವೆ,” ಎಂದು ಮಾಹಿತಿ ನೀಡಿದರು.

ಪ್ರಸ್ತುತ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆಗೆ ಫಾಕೊ ಎಮಲ್ಸಿಫಿಕೇಶನ್ (Phacoemulsification), ಮೆಳ್ಳಗಣ್ಣು ಶಸ್ತ್ರಚಿಕಿತ್ಸೆ, ಮಕ್ಕಳ ಕಣ್ಣಿನ ಚಿಕಿತ್ಸೆ ಹಾಗೂ ಕನ್ನಡಕ ಕಳಚಲು ನೆರವಾಗುವ ಸ್ಮೈಲ್ (SMILE) ಲೇಸರ್ ತಂತ್ರಜ್ಞಾನದಂತಹ ಸುಧಾರಿತ ಸೌಲಭ್ಯಗಳು ಲಭ್ಯವಿವೆ ಎಂದು ಅವರು ತಿಳಿಸಿದರು.

ಆಸ್ಪತ್ರೆಯ ವ್ಯಾಪ್ತಿಯ ಬಗ್ಗೆ ಮಾತನಾಡಿದ ಡಾ. ನಾಡಗೌಡ, “ಡಾ. ಅಗರ್ವಾಲ್ಸ್ ಆಸ್ಪತ್ರೆಯು ಕರ್ನಾಟಕದಲ್ಲಿ 27 ಶಾಖೆಗಳನ್ನು ಹೊಂದಿದೆ. ಆಫ್ರಿಕಾ ಸೇರಿದಂತೆ ವಿಶ್ವದಾದ್ಯಂತ 270ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ನಡೆಸುತ್ತಿದೆ. ಗ್ರಾಮೀಣ ಭಾಗದ ಜನರಿಗೂ ಉತ್ತಮ ಚಿಕಿತ್ಸೆ ತಲುಪಿಸುವ ಉದ್ದೇಶದಿಂದ ಗದಗ, ಹಾವೇರಿ ಮತ್ತು ಮುಂಡಗೋಡ ಪಟ್ಟಣಗಳಲ್ಲಿ ’20-20 ಸ್ಕ್ರೀನಿಂಗ್ ಸೆಂಟರ್’ಗಳನ್ನು ತೆರೆಯಲಾಗಿದೆ. ಅಲ್ಲಿ ರೋಗಿಗಳನ್ನು ತಪಾಸಣೆ ನಡೆಸಿ, ಹೆಚ್ಚಿನ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೆ ಹುಬ್ಬಳ್ಳಿಗೆ ಕಳುಹಿಸಿಕೊಡಲಾಗುತ್ತದೆ,” ಎಂದರು.

ರೆಟಿನಾ ವಿಭಾಗದ ತಜ್ಞರಾದ ಡಾ. ಸಂತೋಷ್ ಕೆ ಅವರು ಮಾತನಾಡಿ, ರೆಟಿನಾ ಅಟ್ಯಾಚ್ಮೆಂಟ್ನಂತಹ (ಪೊರೆ ಕಳಚುವಿಕೆ) ಗಂಭೀರ ಸಮಸ್ಯೆಗಳಿಗೆ ತುರ್ತು ಚಿಕಿತ್ಸೆ ಅತ್ಯಗತ್ಯ. ಸಮಸ್ಯೆ ಕಾಣಿಸಿಕೊಂಡ ಆರು ಗಂಟೆಯೊಳಗೆ ಶಸ್ತ್ರಚಿಕಿತ್ಸೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದರು. ಇದೇ ವೇಳೆ, 40 ವರ್ಷ ಮೇಲ್ಪಟ್ಟವರು ಗ್ಲುಕೋಮಾ (Glaucoma) ಬಗ್ಗೆ ಎಚ್ಚರ ವಹಿಸಬೇಕು. ಇದು ಯಾವುದೇ ಮುನ್ಸೂಚನೆ ನೀಡದೆ ದೃಷ್ಟಿಯನ್ನು ಕಸಿದುಕೊಳ್ಳುವ ‘ಸೈಲೆಂಟ್ ಥೀಫ್’ (Silent thief of sight) ಆಗಿರುವುದರಿಂದ, ನಿಯಮಿತ ತಪಾಸಣೆ ಬಹಳ ಮುಖ್ಯ ಎಂದು ಸಲಹೆ ನೀಡಿದರು. ಇದಕ್ಕಾಗಿ ಆಸ್ಪತ್ರೆಯಲ್ಲಿ ಒಸಿಟಿ (OCT) ಯಂತಹ ಅತ್ಯಾಧುನಿಕ ಸ್ಕ್ಯಾನಿಂಗ್ ವ್ಯವಸ್ಥೆಯಿದೆ ಎಂದು ತಿಳಿಸಿದರು.

ಚಿಕಿತ್ಸೆಯ ಯಶಸ್ಸಿನ ಘಟನೆಯೊಂದನ್ನು ಸ್ಮರಿಸಿದ ಡಾ. ನಾಡಗೌಡ, “ಬೈಲಹೊಂಗಲದ 95 ವರ್ಷದ ಹಣ್ಣು ಮಾರುವ ವೃದ್ಧೆಯೊಬ್ಬರು ಸಂಕೀರ್ಣವಾದ ಕಣ್ಣಿನ ಪೊರೆಯಿಂದಾಗಿ ದೃಷ್ಟಿ ಕಳೆದುಕೊಂಡಿದ್ದರು. ನಮ್ಮಲ್ಲಿ ಶಸ್ತ್ರಚಿಕಿತ್ಸೆ ಪಡೆದ ನಂತರ, ಅವರು ಸಂಪೂರ್ಣ ದೃಷ್ಟಿ ಮರಳಿ ಪಡೆದು ಈಗ ಮತ್ತೆ ತಮ್ಮ ದೈನಂದಿನ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ,” ಎಂದು ಹೆಮ್ಮೆಯಿಂದ ಹೇಳಿದರು.

ಇದಲ್ಲದೆ, ಆಗಸ್ಟ್ 15 ಅಥವಾ ಸೆಪ್ಟೆಂಬರ್ ವೇಳೆಗೆ ರೋಬೋಟಿಕ್ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಯನ್ನು ಪ್ರಾರಂಭಿಸಲಾಗುವುದು. “ರೋಬೋಟಿಕ್ ವ್ಯವಸ್ಥೆಯಿಂದಾಗಿ ವೈದ್ಯರ ಹಸ್ತಕ್ಷೇಪ ಕಡಿಮೆಯಾಗಿ, ಶಸ್ತ್ರಚಿಕಿತ್ಸೆಯಲ್ಲಿ ಮತ್ತಷ್ಟು ನಿಖರತೆ (precision) ಮತ್ತು ಸುರಕ್ಷತೆ ಬರುತ್ತದೆ,” ಎಂದು ಡಾ. ನಾಡಗೌಡ ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಲಹೆಗಾರರಾದ ಡಾ. ರವಿ ನಾಡಗೀರ್, ಡಾ. ಪರಮೇಶ್ವರ್ ಭಟ್, ಡಾ. ಶ್ವೇತಾ ಕೆ, ಡಾ. ಚೇತನ್ ಡಿ ಮತ್ತು ಡಾ. ಸ್ನೇಹಾ ಉಪಸ್ಥಿತರಿದ್ದರು.

Total Views 42
RELATED ARTICLES

Most Popular

Recent Comments

KNN City News
Home
E-Paper