Monday, November 23, 2026
HomeBelagaviಗಂಡನ ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿದ್ದ ಮಹಿಳೆ ಕೊಲೆ ಮಾಡಿದ ಕುಟುಂಬಸ್ಥರು

ಗಂಡನ ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿದ್ದ ಮಹಿಳೆ ಕೊಲೆ ಮಾಡಿದ ಕುಟುಂಬಸ್ಥರು

 

ಬೆಳಗಾವಿ
ಬೆಳಗಾವಿ ಜಿಲ್ಲೆಯಲ್ಲಿ ಮರ್ಯಾದೆಗೇಡು ಹತ್ಯೆಯೊಂದು ನಡೆದಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ತನ್ನ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ ಎಂಬ ಕಾರಣಕ್ಕೆ ಸ್ವಂತ ಕುಟುಂಬದವರೇ ಯುವತಿಯನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಟ್ಟು ಹಾಕಿರುವ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ 24 ವರ್ಷದ ಸತ್ಯವ್ವ ಸಂತೋಷ ಹಳವಿ ಎಂಬುವವರೇ ಕೊಲೆಯಾದ ದುರ್ದೈವಿ. ಸತ್ಯವ್ವಳಿಗೆ ಈ ಮೊದಲೇ ಮದುವೆಯಾಗಿತ್ತು, ಆದರೆ ಕೃಷ್ಣಾ ಪಾಟೀಲ ಎಂಬಾತನನ್ನು ಪ್ರೀತಿಸುತ್ತಿದ್ದ ಆಕೆ, ಇತ್ತೀಚೆಗೆ ತನ್ನ ಪತಿಯನ್ನು ಬಿಟ್ಟು ಆತನ ಜೊತೆ ಮನೆ ಬಿಟ್ಟು ಹೋಗಿದ್ದಳು. ಇದರಿಂದ ತಮ್ಮ ಕುಟುಂಬದ ಮರ್ಯಾದೆ ಹರಾಜಾಗಿದೆ ಎಂದು ಆಕ್ರೋಶಗೊಂಡಿದ್ದ ಮನೆಯವರು ಆಕೆಗಾಗಿ ಹುಡುಕಾಟ ನಡೆಸಿದ್ದರು.
ಮಾರ್ಚ್ 13ರಂದು ಸತ್ಯವ್ವಳನ್ನು ಪತ್ತೆ ಹಚ್ಚಿದ ಕುಟುಂಬಸ್ಥರು, ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಅಥವಾ ಯಾರಿಗೂ ಸುಳಿವು ಸಿಗಬಾರದೆಂಬ ಉದ್ದೇಶದಿಂದ ಶವವನ್ನು ಸುಟ್ಟು ಹಾಕಿದ್ದಾರೆ. ಈ ಬಗ್ಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಈ ಅಮಾನವೀಯ ಕೃತ್ಯ ಬಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಚಿಕ್ಕಪ್ಪ ಪ್ರಕಾಶ ಹಳವರ, ಸಹೋದರ ಶಾನೂರ ಹಳವರ ಹಾಗೂ ಭಾವ ಮೊರಬದ ಕಲ್ಲಪ್ಪ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಈ ಹತ್ಯೆ ಮಹಾರಾಷ್ಟ್ರದ ಮಿರಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮರ್ಯಾದೆ ಹೆಸರಿನಲ್ಲಿ ಸ್ವಂತ ಮಗಳನ್ನೇ ಬಲಿ ಪಡೆದ ಈ ಘಟನೆ ಸ್ಥಳೀಯವಾಗಿ ತೀವ್ರ ಆತಂಕ ಮೂಡಿಸಿದೆ.

Total Views 225
RELATED ARTICLES

Most Popular

Recent Comments

KNN City News
Home
E-Paper