
ಬೆಳಗಾವಿ
ಗಾಂಧಿನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯನ್ನು ಬಂದ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಟಿಗೆ ಮೊರೆ ಹೋದ ವರ್ತಕರಿಗೆ ಹಿನ್ನಡೆಯಾಗಿದೆ. ಲೈಸನ್ಸ್ ರದ್ದುಪಡಿಸಿ ಮಾರುಕಟ್ಟೆಯನ್ನು ಬಂದ್ ಮಾಡಿರುವ ಕ್ರಮದಿಂದ ಜೀವನೋಪಾಯಕ್ಕೆ ಧಕ್ಕೆಯಾಗಿದ್ದು, ವ್ಯಾಪಾರ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ ಎಂದು ವರ್ತಕರು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.
ಮಾರುಕಟ್ಟೆ ಬಂದ್ ಆಗಿರುವುದರಿಂದ ದಿನನಿತ್ಯದ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ನೂರಾರು ವರ್ತಕರು ಹಾಗೂ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ನ್ಯಾಯ ಪಡೆಯಲು ವರ್ತಕರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಚಾರಣೆ ವೇಳೆ ಕೆಎಟಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಪ್ರಕರಣವು ನೇರವಾಗಿ ಹೈಕೋರ್ಟ್ ವ್ಯಾಪ್ತಿಗೆ ಬರುವುದರಿಂದ, ಮೊದಲು ಹೈಕೋರ್ಟ್ಗೆ ಹೋಗಬೇಕಾಗಿತ್ತು. ಅದರ ಬದಲು ನೇರವಾಗಿ ಕೆಎಟಿಗೆ ಅರ್ಜಿ ಸಲ್ಲಿಸಿರುವುದು ಕಾನೂನು ಕ್ರಮಬದ್ಧತೆಯ ಉಲ್ಲಂಘನೆ ಎಂದು ಕೆಎಟಿ ಸೂಚಿಸಿದೆ. ಹೀಗಾಗಿ “ಈ ವಿಷಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ” ಎಂದು ಸ್ಪಷ್ಟಪಡಿಸಿ, ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದೆ.
