Thursday, November 19, 2026
HomeBelagaviಕರವೇ ಜಿಲ್ಲಾಧ್ಯಕ್ಷಗೆ ಐಷಾರಾಮಿ ಕಾರ್ ಉಡುಗೊರೆಯಾಗಿ ಬಂದಿದ್ದು ಹೇಗೆ ?

ಕರವೇ ಜಿಲ್ಲಾಧ್ಯಕ್ಷಗೆ ಐಷಾರಾಮಿ ಕಾರ್ ಉಡುಗೊರೆಯಾಗಿ ಬಂದಿದ್ದು ಹೇಗೆ ?

ಬೆಳಗಾವಿ
ಕೋಟ್ಯಂತರ ರೂಪಾಯಿ ಠೇವಣಿ ವಂಚನೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಶಿವಾನಂದ ನೀಲಣ್ಣವರ ಪ್ರಕರಣಕ್ಕೆ ಇದೀಗ ಮತ್ತೊಂದು ಹೊಸ ತಿರುವು ಸಿಕ್ಕಿದ್ದು, ಕಳೆದ ಡಿಸೆಂಬರ್ 27ರಂದು ಬೆಳಗಾವಿಯ ಸರದಾರ್ಸ್ ಮೈದಾನದಲ್ಲಿ ನಡೆದ “ಬೆಳಗಾವಿ ಉತ್ಸವ” ಕಾರ್ಯಕ್ರಮದ ಸುತ್ತ ಹೊಸ ವಿವಾದ ಎದ್ದಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಆರ್. ಅಭಿಲಾಷ್ ಅವರು ಶಿವಾನಂದ ನೀಲಣ್ಣವರ ಪ್ರಾಯೋಜಕತ್ವದಲ್ಲಿ ಈ ಉತ್ಸವ ಆಯೋಜಿಸಿ, ಪ್ರತಿಯಾಗಿ ಸುಮಾರು 1.5 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರ್ ಉಡುಗೊರೆಯಾಗಿ ಪಡೆದಿದ್ದಾರೆ ಎನ್ನುವ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿ ಉತ್ಸವವನ್ನು ಭರ್ಜರಿಯಾಗಿ ಆಯೋಜಿಸಲು ಚಲನಚಿತ್ರ ರಂಗದ ಖ್ಯಾತ ನಟ, ನಟಿಯರನ್ನು ಆಹ್ವಾನಿಸಲಾಗಿತ್ತು. ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಭಾರಿ ಪ್ರಮಾಣದ ಹಣ ಖರ್ಚಾಗಿದ್ದು, ಅದರ ಬಹುಪಾಲು ಶಿವಂ ಅಸೋಸಿಯೇಟ್ಸ್ ಮೂಲಕವೇ ವ್ಯವಸ್ಥೆಯಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇದೀಗ ಶಿವಂ ಅಸೋಸಿಯೇಟ್ಸ್ ವಿರುದ್ಧ ಸಾವಿರಾರು ಕೋಟಿ ರೂ. ಅಕ್ರಮ ಠೇವಣಿ ಸಂಗ್ರಹ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಆ ಹಣವನ್ನು ವಿವಿಧ ಕಾರ್ಯಕ್ರಮಗಳು, ಉತ್ಸವಗಳು ಮತ್ತು ಪ್ರಚಾರ ಚಟುವಟಿಕೆಗಳಿಗೆ ಬಳಸಲಾಗಿತ್ತೇ ಎಂಬ ಪ್ರಶ್ನೆ ಎದುರಾಗಿದೆ.


ಬೆಳಗಾವಿ ಉತ್ಸವ ಆಯೋಜನೆಯ ಬಳಿಕ ಆರ್. ಅಭಿಲಾಷ್ ಅವರಿಗೆ ದುಬಾರಿ ಐಷಾರಾಮಿ ಕಾರೊಂದು ಉಡುಗೊರೆಯಾಗಿ ನೀಡಲಾಗಿದೆ ಎನ್ನಲಾಗುತ್ತಿದೆ. ಈ ಕಾರಿನ ಮೌಲ್ಯ ಸುಮಾರು 1.5 ಕೋಟಿ ರೂ. ಎಂದು ಹೇಳಲಾಗುತ್ತಿದ್ದು, ಅದರ ಹಣಕಾಸಿನ ಮೂಲದ ಕುರಿತು ಇದೀಗ ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದರ ಜೊತೆಗೆ “ಸ್ವಚ್ಛ ಬೆಳಗಾವಿ ಸಂಭ್ರಮ” ಹೆಸರಿನಲ್ಲಿ ನಡೆದ ಕೆಲವು ಕಾರ್ಯಕ್ರಮಗಳಿಗೂ ಶಿವಾನಂದ ನೀಲಣ್ಣವರಿಂದ ಭಾರಿ ಪ್ರಮಾಣದ ಹಣ ಹಾಗೂ ದುಬಾರಿ ಉಡುಗೊರೆಗಳು ಹರಿದು ಹೋಗಿವೆ ಎನ್ನುವ ಸಂಗತಿಯೂ ಬೆಳಕಿಗೆ ಬರುತ್ತಿದೆ. ಕೆಲ ಸಂಘಟಕರು ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ದುಬಾರಿ ಗಿಫ್ಟ್‌ಗಳು, ವಾಹನಗಳು ಮತ್ತು ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, “ಬೆಳಗಾವಿ ಉತ್ಸವ ಆಯೋಜನೆ ವೇಳೆ ಐಷಾರಾಮಿ ಕಾರ್ ಉಡುಗೊರೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅದರ ಸತ್ಯಾಸತ್ಯತೆ ತನಿಖೆಯ ವೇಳೆ ಸ್ಪಷ್ಟವಾಗಲಿದೆ. ಹಣದ ಮೂಲ, ವ್ಯವಹಾರದ ಸ್ವರೂಪ ಮತ್ತು ಸಂಬಂಧಪಟ್ಟ ವ್ಯಕ್ತಿಗಳ ಪಾತ್ರದ ಕುರಿತು ಪರಿಶೀಲನೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.
ನಿನ್ನೆಯವರೆಗೂ ಆರ್. ಅಭಿಲಾಷ್ ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಶಿವಾನಂದ ನೀಲಣ್ಣವರ ಜೊತೆ ಕಾರ್ ಸ್ವೀಕರಿಸಿರುವ ಫೋಟೋಗಳು ಮತ್ತು ಪೋಸ್ಟ್‌ಗಳು ಕಾಣಿಸುತ್ತಿದ್ದವು. ಆದರೆ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಆ ಪೋಸ್ಟ್‌ಗಳು ಏಕಾಏಕಿ ಡಿಲೀಟ್ ಆಗಿವೆ. ಈ ಬೆಳವಣಿಗೆ ತನಿಖಾಧಿಕಾರಿಗಳಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಶಿವಂ ಅಸೋಸಿಯೇಟ್ಸ್ ಮೂಲಕ ಸಂಗ್ರಹಿಸಲಾದ ಹಣವನ್ನು ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರಭಾವ ವಿಸ್ತರಣೆಗೆ ಬಳಸಲಾಗಿತ್ತೇ ಎಂಬ ಆಯಾಮದಲ್ಲಿಯೂ ತನಿಖೆ ಮುಂದುವರಿದಿದೆ.
ಈ ನಡುವೆ ಶಿವಾನಂದ ನೀಲಣ್ಣವರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಇನ್ನಷ್ಟು ಪ್ರಭಾವಿ ವ್ಯಕ್ತಿಗಳ ಹೆಸರುಗಳು ಹೊರಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ತನಿಖೆ ದಿನದಿಂದ ದಿನಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ.

Total Views 911
RELATED ARTICLES

Most Popular

Recent Comments

KNN City News
Home
E-Paper