
ಬೆಳಗಾವಿ
4,500 ಕೋಟಿ ರೂಪಾಯಿ ವಂಚನೆ ಆರೋಪ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ ಡಿಐಜಿ ಭೀಮಾಶಂಕರ್ ಗುಳೇದ್ ಭಾನುವಾರ ಮಾಳಮಾರುತಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಆರೋಪಿ ಶಿವಾನಂದ ನೀಲಣ್ಣವರನಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡರು.
ಡಿಐಜಿ ಠಾಣೆಗೆ ಆಗಮಿಸುತ್ತಿದ್ದಂತೆ ಕೈಮುಗಿದು “ಓಂ ನಮಃ ಶಿವಾಯ” ಎಂದು ಹೇಳಿದ ಶಿವಾನಂದ ನೀಲಣ್ಣವರ್, ವಿವಿಧ ಊರುಗಳಲ್ಲಿ ಹೂಡಿಕೆ ಸಂಗ್ರಹಿಸಿದ ಬಗ್ಗೆ ಹಾಗೂ ಎಷ್ಟು ಜನರಿಂದ ಹಣ ಪಡೆದುಕೊಂಡಿದ್ದಾನೆ ಎಂಬ ಕುರಿತು ಮಾಹಿತಿ ನೀಡಿದ ಎಂದು ತಿಳಿದುಬಂದಿದೆ.
ಈ ವೇಳೆ ಮಾರ್ಕೆಟ್ ಎಸಿಪಿ ಸಂತೋಷ ಸತ್ಯನಾಯಕ್, ಸಿಪಿಐ ಬಿ.ಆರ್. ಗಡ್ಡೇಕರ್ ಹಾಗೂ ಸಿಐಡಿ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವ ಕುರಿತು ನಾಳೆ ಸ್ಥಳೀಯ ಪೊಲೀಸರು ಮತ್ತು ಸಿಐಡಿ ಅಧಿಕಾರಿಗಳ ನಡುವೆ ಮಹತ್ವದ ಚರ್ಚೆ ನಡೆಯಲಿದೆ.
