
ಬೆಳಗಾವಿ
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗೊತ್ತುವಳಿ, ಕಾವೇರಿ ನದಿ ನೀರಿ ಹಂಚಿಕೆ ವಿರುದ್ಧ, ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಆ.13 ರಂದು ಕರ್ನಾಟಕ ಬಂದ್ ಕರೆ ನೀಡಲಾಗಿದೆ ಎಂದು ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ಬುಧವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಗೊತ್ತುವಳಿ ಅಂಗೀಕರಿಸಿದಿದ್ದರೇ, ಪಾಲಿಕೆಯನ್ನು ಸೂಪರ್ ಸೀಡ್ ಮಾಡುವಂತೆ ಸಚಿವ ಯತೀಂದ್ರ ಸಿದ್ದರಾಮಯ್ಯಗೆ ಒತ್ತಾಯಿಸುವೆ ಎಂದರು.
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಹಾಗೂ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಹಿತ ಕಾಪಾಡಲು ವಿಫಲರಾಗಿದ್ದಾರೆ. ಮಹದಾಯಿ ಕಳಸಾ ಬಂಡೂರಿ, ಕಾವೇರಿ, ಕೃಷ್ಣಾ ನದಿ ನೀರಾವರಿ ಹಂಚಿಕೆಯ ಬಗ್ಗೆ ಕೇಂದ್ರ ಸರಕಾರದ ಮುಂದೆ ಪ್ರಬಲ ವಾದ ಮಂಡಿಸಲು ವಿಫಲರಾಗಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ಉಳಿಸಲು ಅನೇಕರು ಹೋರಾಟ ಮಾಡಿದ್ದಾರೆ. ಅವರೊಂದಿಗೆ ಸದಾ ಇದ್ದೇನೆ. ಇರುತ್ತೇನೆ. ರಾಜಕಾರಣಿಗಳಿಗೆ ಬೆಳಗಾವಿ ಗಡಿನಾಡು, ಇಲ್ಲಿನ ಪ್ರಶ್ನೆಯ ಬಗ್ಗೆ ಯಾರಿಗೂ ಬೇಕಿಲ್ಲ. ಅವರು ಕೇವಲ ರಾಜಕೀಯ ಮಾಡುತ್ತಿದ್ದೇವೆ. ಕನ್ನಡ ಗಟ್ಟಿಗೊಳಿಸಲು ಶ್ರಮಿಸಿದ್ದು ಕನ್ನಡ ಸಂಘಟನೆಗಳು ಎಂದರು.
ಕನ್ನಡಕ್ಕಾಗಿ ಬೆಳಗಾವಿಯಲ್ಲಿ ಯಾವ ಸಂಸದ, ಶಾಸಕರು ಬೀದಿಗೆ ಬಂದು ಹೋರಾಟ ಮಾಡಲಿಲ್ಲ. ರಾಜ್ಯದ ಸಚಿವರು, ಮುಖ್ಯಮಂತ್ರಿಗಳು ಬೆಳಗಾವಿಯ ಉಳಿವಿಗಾಗಿ ಮಾತನಾಡಿಲ್ಲ. ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಬಂದಾಗ ಕನ್ನಡದ ಬಗ್ಗೆ ಗಟ್ಟಿ ನಿರ್ಧಾರ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಏಕೀಕರಣಕ್ಕೆ ಬೆಳಗಾವಿ ಜನರು ಹೋರಾಟ ಮಾಡಿದ್ದಾರೆ. ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಸೇರಿಸಿಕೊಂಡಿದ್ದು ಏಕೆ ? ರೈತರ ಸಮಸ್ಯೆ, ಜಲಾಶಯ, ವಿದ್ಯುತ್ ಶಕ್ತಿ, ಕೈಗಾರಿಕೆಯ ಬಗ್ಗೆ ಚರ್ಚೆಯಾಗಲಿಲ್ಲ. ಮುಂಬರುವ ಅಧಿವೇಶದಲ್ಲಿ ಉತ್ತರ ಕರ್ನಾಟದ ಬಗ್ಗೆ ಏನು ಮಾಡಿದ್ದಾರೆ ಎನ್ನುವುದು ಶ್ವೇತ ಪತ್ರ ಹೊರಡಿಸಲಿ ಎಂದು ಮುಖ್ಯಮಂತ್ರಿಗಳಿಗೆ ಸವಾಲ್ ಹಾಕಿದರು.
ಕಾವೇರಿ ನಿರ್ವಹಣಾ ಸಮಿತಿ ತಮಿಳುನಾಡಿಗೆ ನೀರು ಹಂಚಿಕೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರತಿಪಕ್ಷದ ಸಭೆ ಕರೆದಿದ್ದರು. ಅಲ್ಲಿ ಮ್ಯಾಜಿಕ್ ಮಾಡಿದ ಶಿವಕುಮಾರ ಅವರು, ಈಗ ತಮಿಳುನಾಡಿನಲ್ಲಿ ಕಾವೇರಿ ನೀರಿನ ಬಗ್ಗೆ ಹೋರಾಟ ತೀವ್ರವಾಗಿದೆ ಎಂದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ ಎಂದು ಗೊತ್ತುವಳಿ ನಿರ್ಣಯ ಮಾಡಬೇಕು. ಪಕ್ಷಾತೀತವಾಗಿ ಪಾಲಿಕೆಯಲ್ಲಿ ನಿರ್ಣಯ ಮಾಡಲಿ, ಬಿಡಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಇದ್ದೆ ಇರುತ್ತದೆ ಎಂದರು.
ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ, ಮಹಾಂತೇಶ ರಣಗಟ್ಟಿಮಠ, ಮಹಾದೇವ ತಳವಾರ, ಮಹೇಶ ಶಿಗಿಹಳ್ಳಿ, ವಾಜೀದ್ ಹಿರೇಕುಡಿ, ಬಸವರಾಜ ಉಪ್ಪಾರ, ಸೋಮು ರೈನಾಪುರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
