
ಬೆಳಗಾವಿ
ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಭ್ರಷ್ಟಾಚಾರ ಹಾಗೂ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ (ಡಿ.ಎ.) ಪ್ರಕರಣ ಎದುರಿಸುತ್ತಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ್ ರಾಜೀನಾಮೆಗೆ ಆಗ್ರಹಿಸಿ ಆ.19 ರಂದು ಬೆಳಗಾವಿ ಡಿ.ಸಿ. ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ರಾಜಕುಮಾರ ಟೋಪಣ್ಣವರ ಹಾಗೂ ಸುಜೀತ್ ಮುಳಗುಂದ ತಿಳಿಸಿದ್ದಾರೆ.
ಅಭಯ ಪಾಟೀಲ್ ವಿರುದ್ಧ 2012ರಿಂದಲೂ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಇದ್ದು, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕರ್ನಾಟಕ ಲೋಕಾಯುಕ್ತ ಈ ಪ್ರಕರಣದಲ್ಲಿ ಎಫ್ ಐ ಆರ್ ದಾಖಲಿಸಿದೆ. ಲೋಕಾಯುಕ್ತ ಪೊಲೀಸ್ ತನಿಖೆಯ ಪ್ರಕಾರ ಅವರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪ್ರಮಾಣ ಶೇ. 128.01 ರಷ್ಟಿದೆ ಎಂದು ವರದಿಯಾಗಿದೆ. ಈ ಪ್ರಕರಣ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ವಿಚಾರಣೆಯಲ್ಲಿದ್ದು, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ನಂತರವಷ್ಟೇ ತನಿಖೆಗೆ ವೇಗ ಸಿಕ್ಕಿದೆ ಎಂದಿದ್ದಾರೆ.
ಇಂಥ ಗಂಭೀರ ಆರೋಪ ಎದುರಿಸುತ್ತಿರುವ ಶಾಸಕರೊಬ್ಬರು, ಇತರ ಜನಪ್ರತಿನಿಧಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ರಾಜೀನಾಮೆಗೆ ಆಗ್ರಹಿಸುವ ನೈತಿಕ ಹಕ್ಕು ಹೊಂದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಜನಪ್ರತಿನಿಧಿಗಳಿಗೆ ಒಂದೇ ಮಾನದಂಡ ಇರಬೇಕು ಎಂದು ಆಗ್ರಹಿಸಿ, ಅಭಯ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಈ ಧರಣಿ ಸತ್ಯಾಗ್ರಹದ ಮೂಲಕ ಒತ್ತಾಯಿಸಲಾಗುವುದು ಎಂದಿದ್ದಾರೆ.
ಇದೊಂದು ಭ್ರಷ್ಟಾಚಾರ ವಿರೋಧಿ ಆಂದೋಲನವಾಗಿದ್ದು, ಬೆಳಗಾವಿಯ ಪ್ರತಿಯೊಬ್ಬ ಸಾರ್ವಜನಿಕ, ಸಂಘಟನೆ ಹಾಗೂ ಮಾಧ್ಯಮ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ನ್ಯಾಯಯುತ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
