
ಕೆಪಿಎಸ್ಸಿ ಹಗರಣ ಶಂಕೆ: ಕಿತ್ತೂರಿನಲ್ಲಿ ಇಡಿ ಅಧಿಕಾರಿಗಳ ದಿಢೀರ್ ದಾಳಿ, ಪರಿಶೀಲನೆ
ಚನ್ನಮ್ಮನ ಕಿತ್ತೂರು: ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಪಟ್ಟಣದ ಸದಾಶಿವ ನಗರದಲ್ಲಿರುವ ಕುಬೇರ ಜಾಯ್ಕನವರ ಮೇಲೆ ಮಂಗಳವಾರ ಮುಂಜಾನೆ ದಿಢೀರ್ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ.
ಇಲ್ಲಿನ ಬೀಡಿ ಮಾರ್ಗದಲ್ಲಿರುವ ಕುಬೇರ ಜಾಯಕ್ಕನವರ ಅವರ ನಿವಾಸಕ್ಕೆ ಬೆಳ್ಳಂಬೆಳಗ್ಗೆ ಆಗಮಿಸಿದ ಅಧಿಕಾರಿಗಳ ತಂಡ, ಹಲವು ಗಂಟೆಗಳ ಕಾಲ ಕಡತಗಳನ್ನು ಪರಿಶೀಲಿಸಿ ಮಾಹಿತಿ ಕಲೆಹಾಕಿತು.
ಕೆಪಿಎಸ್ಸಿ ಪಶು ವೈದ್ಯಾಧಿಕಾರಿ ಪರೀಕ್ಷಾ ಹಗರಣದಲ್ಲಿ ಕುಬೇರ ಜಾಯಕ್ಕನವರ ಅವರ ಸಹೋದರಿಯ ಪುತ್ರ ಅಭಿಷೇಕ ಮಹಾದೇವ ದೇವಲಾಪುರ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಅಧಿಕಾರಿಗಳ ತಂಡವು ಮೊದಲು ಗೋಕಾಕ ತಾಲ್ಲೂಕಿನ ಘಟಪ್ರಭಾದಲ್ಲಿರುವ ಅಭಿಷೇಕ ಅವರ ನಿವಾಸಕ್ಕೆ ತೆರಳಿತ್ತು. ಆದರೆ, ಆತನ ಪಾಲಕರು ಚನ್ನಮ್ಮನ ಕಿತ್ತೂರಿನಲ್ಲಿರುವ ಸಂಬಂಧಿಕರ ಮನೆಯಲ್ಲಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಲ್ಲಿಗೆ ಧಾವಿಸಿ ಪರಿಶೀಲನೆ ನಡೆಸಿದರು.
ತಪಾಸಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಬ್ಬರು ಇಡಿ ಹಿರಿಯ ಅಧಿಕಾರಿಗಳೊಂದಿಗೆ ಮೂವರು ಸಿಆರ್ಪಿಎಫ್ (CRPF) ಸಶಸ್ತ್ರ ಯೋಧರು ಬಿಗಿ ರಕ್ಷಣೆ ಒದಗಿಸಿದ್ದರು.
