
ಬೆಳಗಾವಿ
ದಂಡುಮಂಡಳಿ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕುರಿತು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಸಾರ್ವಜನಿಕರು ಹಾಗೂ ಗುತ್ತಿಗೆದಾರರು ಆತಂಕಪಡುವ ಅಗತ್ಯವಿಲ್ಲ ಎಂದು ದಂಡುಮಂಡಳಿ ಸಿಇಒ ಮಂಚಲವಾರ ಸುದಾಮ ಹರಿವಿಜಯ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದಂಡುಮಂಡಳಿ ವ್ಯಾಪ್ತಿಯ 112 ಎಕರೆ ಪ್ರದೇಶವನ್ನು ಹೊರತುಪಡಿಸುವ ಪ್ರಸ್ತಾವನೆಯನ್ನು ಮಾತ್ರ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೆ ರಾಜ್ಯ ಸರ್ಕಾರದಿಂದ ಈವರೆಗೆ ಯಾವುದೇ ಅಧಿಕೃತ ಲಿಖಿತ ಅನುಮೋದನೆ ದೊರೆತಿಲ್ಲ ಎಂದರು.
ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆಯಿಂದ 756 ಎಕರೆ ಪ್ರದೇಶವನ್ನು ಹಸ್ತಾಂತರಿಸುವ ಮತ್ತೊಂದು ಪ್ರಸ್ತಾವನೆ ಬಂದಿದ್ದು, ಇದಕ್ಕೆ ಡಿಒ ಹಾಗೂ ಸ್ಥಳೀಯ ಮಿಲಿಟರಿ ಪ್ರಾಧಿಕಾರದಿಂದ ಆಕ್ಷೇಪಣೆ ವ್ಯಕ್ತವಾಗಿದೆ ಎಂದರು.
ಪ್ರದೇಶ ಹಸ್ತಾಂತರದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಸೇರಿದೆ. ರಾಜ್ಯ ಸರ್ಕಾರದ ಪ್ರಸ್ತಾವನೆ ರಕ್ಷಣಾ ಸಚಿವಾಲಯಕ್ಕೆ ತಲುಪಿದ ಬಳಿಕವೇ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದರು.
ದಂಡುಮಂಡಳಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆದಾರರು ಹಾಗೂ ಟೆಂಡರ್‌ದಾರರು ಪಾವತಿ ಕುರಿತು ಆತಂಕಪಡುವ ಅಗತ್ಯವಿಲ್ಲ. ಕೈಗೊಂಡಿರುವ ಕಾಮಗಾರಿಗಳಿಗೆ ನಿಯಮಾನುಸಾರ ಹಣ ಪಾವತಿಸಲಾಗುವುದು. ಮುಂದಿನ ನಿರ್ಧಾರಗಳು ಸಾರ್ವಜನಿಕರ ಹಿತದೃಷ್ಟಿಯಿಂದಲೇ ಕೈಗೊಳ್ಳಲಾಗುವುದು ಎಂದರು.
