Monday, November 23, 2026
HomeBelagaviನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಜಮೀನು ಮಾರಾಟ: ಖಿಲಾಡಿ ಅಜ್ಜಿಯ ಬಂಧನ

ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಜಮೀನು ಮಾರಾಟ: ಖಿಲಾಡಿ ಅಜ್ಜಿಯ ಬಂಧನ

ಬೆಳಗಾವಿ
ಬೇರೊಬ್ಬರ ಹೆಸರಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ನಕಲಿ ದಾಖಲೆಗಳ ಮೂಲಕ ತನ್ನದೆಂದು ಬಿಂಬಿಸಿ ಮಾರಾಟ ಮಾಡಿದ ಆರೋಪದಡಿ 80 ವರ್ಷದ ಮಹಿಳೆಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಡಗಾಂವ ಗಣೇಶ ಕಾಲೋನಿ ನಿವಾಸಿ ಮಂದಾಕಿನಿ ಪರಿಶವಾಡಕರ ಬಂಧಿತ ಆರೋಪಿ.
ಕಣಬರ್ಗಿ ರಸ್ತೆಯ ಮಹಾಂತೇಶ ನಗರದಲ್ಲಿರುವ ಪ್ಲಾಟ್ ನಂ.2313 ಹಾಗೂ ಸಿಟಿಎಸ್ ನಂ.9449ರ ಜಾಗ ರತ್ನಾ ಯಶವಂತ ಮಲ್ಲೂಕರ ಅವರ ಹೆಸರಿನಲ್ಲಿತ್ತು. ಈ ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡುವ ಉದ್ದೇಶದಿಂದ ಮಂದಾಕಿನಿ, ರತ್ನಾ ಅವರಂತೆ ನಟನೆ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
2023ರ ಸೆಪ್ಟೆಂಬರ್ 16ರಂದು ಬೆಳಗಾವಿ ಉತ್ತರ ಉಪನೋಂದಣಾಧಿಕಾರಿ ಕಚೇರಿಗೆ ತೆರಳಿದ್ದ ಆರೋಪಿ, ರತ್ನಾ ಮಲ್ಲೂಕರ ಅವರ ಹೆಸರಿನಲ್ಲಿ ವೆಬ್ ಕ್ಯಾಮೆರಾದಲ್ಲಿ ಫೋಟೊ ತೆಗೆಸಿಕೊಂಡಿದ್ದಲ್ಲದೆ, ಅವರ ಹೆಸರಿನಲ್ಲಿ ಹೆಬ್ಬೆರಳಿನ ಗುರುತು ಹಾಗೂ ಸಹಿ ನೀಡಿ ಜಾಗವನ್ನು ಮತ್ತೊಬ್ಬರಿಗೆ ಸೇಲ್‌ಡೀಡ್ ಮಾಡಿರುವ ಆರೋಪವಿದೆ.
ಜಾಗದ ಮಾಲೀಕರಿಗೆ ಈ ವಂಚನೆ ತಿಳಿದುಬಂದ ಬಳಿಕ ರತ್ನಾ ಮಲ್ಲೂಕರ ಅವರು 2025ರ ಫೆಬ್ರವರಿ 4ರಂದು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮಂದಾಕಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಹಲವು ಅಂಶಗಳು ಬಹಿರಂಗಗೊಂಡಿವೆ.
ಪ್ರಕರಣದಲ್ಲಿ ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ಕಾಕತಿಯ ಸಿದ್ದೇಶ್ವರ ನಗರದ ನಿವಾಸಿ ರಾಹುಲ್ ಅನೀಲ ಮಗದುಮ್ ಎಂಬಾತನ ವಿರುದ್ಧವೂ ಪ್ರಕರಣ ದಾಖಲಾಗಿದೆ. ರಾಹುಲ್ ಈಗಾಗಲೇ ದಾಖಲಾಗಿರುವ ಇನ್ನೆರಡು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

Total Views 239
RELATED ARTICLES

Most Popular

Recent Comments

KNN City News
Home
E-Paper