Monday, November 23, 2026
HomeBelagaviಚವಾಟಗಲ್ಲಿ ಸ್ಫೋಟ ಪ್ರಕರಣಕ್ಕೆ ಸ್ಫೋಟಕ ತಿರುವು

ಚವಾಟಗಲ್ಲಿ ಸ್ಫೋಟ ಪ್ರಕರಣಕ್ಕೆ ಸ್ಫೋಟಕ ತಿರುವು

ಬೆಳಗಾವಿ
ಗಣೇಶೋತ್ಸವ ಸಂಭ್ರಮದಲ್ಲಿದ್ದ ಕುಟುಂಬವೊಂದನ್ನು ಕಣ್ಣೀರಿನಲ್ಲಿ ಮುಳುಗಿಸಿದ ಚವಾಟಗಲ್ಲಿಯ ಡೋರಗಲ್ಲಿಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಸೆ.14ರಂದು ತಡರಾತ್ರಿ ಫ್ರಿಡ್ಜ್ ಸ್ಫೋಟದಿಂದ ಸಂಭವಿಸಿದ ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದು, ಸ್ಫೋಟಕ್ಕೂ ಮುನ್ನ ಅಪರಿಚಿತ ವ್ಯಕ್ತಿಯೊಬ್ಬ ಬಕೆಟ್ ಹಿಡಿದುಕೊಂಡು ಧಮೋನೆ ಕುಟುಂಬದ ಸಣ್ಣ ಮನೆಯ ಶೆಡ್‌ ಬಳಿ ಬಂದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸ್ಫೋಟಕ್ಕೂ ಮುನ್ನ ಬಕೆಟ್ ಹಿಡಿದು ಬಂದಿದ್ದ ಆಗಂತುಕ
ದುರಂತ ಸಂಭವಿಸಿ ಏಳು ದಿನಗಳ ಬಳಿಕ ಧಮೋನೆ ಮನೆಯ ಪಕ್ಕದ ಮನೆಯ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ, ಅಪರಿಚಿತ ವ್ಯಕ್ತಿಯೊಬ್ಬ ಬಕೆಟ್ ಹಿಡಿದುಕೊಂಡು ಶೆಡ್‌ ಬಳಿ ಬಂದು, ಸುಮಾರು ನಾಲ್ಕೈದು ನಿಮಿಷಗಳ ಬಳಿಕ ಖಾಲಿ ಕೈಯಲ್ಲಿ ಅಲ್ಲಿಂದ ಓಡಿ ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ದೃಶ್ಯಗಳು ಪ್ರಕರಣದ ತನಿಖೆಯಲ್ಲಿ ಮಹತ್ವದ ಸುಳಿವಾಗುವ ಸಾಧ್ಯತೆ ಇದ್ದು, ಸ್ಫೋಟಕ್ಕೂ ಮುನ್ನ ವ್ಯಕ್ತಿಯ ಚಲನವಲನಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಆದರೆ, ಸಿಸಿ ಕ್ಯಾಮರಾದಲ್ಲಿ ಕಂಡುಬರುವ ವ್ಯಕ್ತಿಗೂ ಸ್ಫೋಟಕ್ಕೂ ನೇರ ಸಂಬಂಧವಿದೆಯೇ ಎಂಬುದು ಪೊಲೀಸ್ ತನಿಖೆಯಿಂದಲೇ ಖಚಿತವಾಗಬೇಕಿದೆ.
ಒಂದೇ ಕುಟುಂಬದ ಆರು ಮಂದಿ ಸಾವು
ಸ್ಫೋಟದ ಪರಿಣಾಮ ಶಾರದಾ ಗಜಾನನ ಧಮೋನೆ, ಭಾರತಿ ರಾಜಾರಾಮ ಧಮೋನೆ, ಪ್ರಿಯಾ ಗಜಾನನ ಧಮೋನೆ ಹಾಗೂ ಗಂಗಾ ಗಜಾನನ ಧಮೋನೆ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಗಜಾನನ ರಾಜಾರಾಮ ಧಮೋನೆ ಹಾಗೂ ರೋಷನ್ ಗಜಾನನ ಧಮೋನೆ ಅವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ದುರಂತದಿಂದ ಕುಟುಂಬದಲ್ಲಿ ಆರು ಮಂದಿ ಮೃತಪಟ್ಟಿದ್ದು, ಸ್ಥಳೀಯರಲ್ಲಿ ತೀವ್ರ ದುಃಖ ಆವರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಅಪರಿಚಿತ ವ್ಯಕ್ತಿ ಯಾರು? ಆತ ಬಕೆಟ್ ಹಿಡಿದುಕೊಂಡು ಶೆಡ್‌ ಬಳಿ ಏಕೆ ಬಂದಿದ್ದ? ಸ್ಫೋಟಕ್ಕೂ ಮುನ್ನ ನಡೆದ ಚಟುವಟಿಕೆಗಳೇನು? ಎಂಬ ಹಲವು ಪ್ರಶ್ನೆಗಳಿಗೆ ತನಿಖೆಯ ಬಳಿಕ ಉತ್ತರ ದೊರೆಯಬೇಕಿದೆ.ಸ್ಫೋಟದ ನೈಜ ಕಾರಣ ಮತ್ತು ಅಪರಿಚಿತ ವ್ಯಕ್ತಿಯ ಗುರುತು ತನಿಖೆಯಿಂದ ಬಹಿರಂಗವಾಗಬೇಕಿದೆ.

Total Views 510
RELATED ARTICLES

Most Popular

Recent Comments

KNN City News
Home
E-Paper