
ಬೆಂಗಳೂರು
ಜ್ವರ ಎಂದು ಆಸ್ಪತ್ರೆಗೆ ಸೇರಿಸಿದ್ದ ಮಗು ಅಸಹಜವಾಗಿ ಮೃತಪಟ್ಟಿರುವ ಘಟನೆ ಥಣಿಸಂದ್ರದ ಪ್ರಕೃತಿ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ. ಸಕೀನಾ ಎಂಬ ನಾಲ್ಕು ವರ್ಷದ ಹೆಣ್ಣು ಮಗು ದಾರುಣವಾಗಿ ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ ಕಳಪೆ ಚಿಕಿತ್ಸೆ ಹಾಗೂ ಬೇಜವಾಬ್ದಾರಿಯೇ ಮಗುವಿನ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಸೈಫ್ ಅಲಿ ಮತ್ತು ಸಕಿನಾ ತಾಜ್ ಎಂಬ ದಂಪತಿಗಳ ಮಗುವಿಗೆ ನಿನ್ನೆಯಿಂದ ಜ್ವರ ಪ್ರಾರಂಭವಾಗಿತ್ತು . ನಿನ್ನೆ ಮಧ್ಯಾಹ್ನ ಥಣಿಸಂದ್ರದ ಮುಖ್ಯರಸ್ತೆಯಲ್ಲಿರುವ ಪ್ರಕೃತಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ಆದರೆ ಮಗುವಿಗೆ ಔಷಧಿ ಕುಡಿಸುವ ವೇಳೆ ಹಾಗೂ ಚಿಕಿತ್ಸೆಯ ವೇಳೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆಂದು ಪೋಷಕರು ಆರೋಪಿಸಿದ್ದು, ಮಗುವಿಗೆ ಇಂದು ಬೆಳಗ್ಗೆ ರಕ್ತವಾಂತಿ ಪ್ರಾರಂಭವಾಗಿತ್ತು.
ಸತ್ತ ಮಗುವಿಗೇ ಚಿಕಿತ್ಸೆ ಕೊಟ್ಟರೇ ವೈದ್ಯರು? ಮಗು ಸುಮಾರು 10 ಗಂಟೆಗೇ ಉಸಿರಾಟ ನಿಲ್ಲಿಸಿತ್ತಾದರೂ, ನಾವಿನ್ನೂ ಚಿಕಿತ್ಸೆ ಕೊಡುತ್ತೇವೆ ಎಂದು ಆಸ್ಪತ್ರೆಯವರು ನಮ್ಮನ್ನು ವೃಥಾ ಹಣ ಸುಲಿಗೆ ಮಾಡಿದ್ದಾರೆಂದು ಪೋಷಕರು ಆರೋಪಿಸಿದ್ಧಾರೆ. ಅಷ್ಟೇ ಅಲ್ಲದೇ , ಮಗು ಮೃತಪಟ್ಟ ಮೇಲೂ ಸಹ ಐಸಿಯುಗೆ ದಾಖಲಿಸದೇ, ಸಮೀಪದ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಿರಿ, ಇಲ್ಲಿ ಆಕ್ಸಿಜನ್ ವ್ಯವಸ್ಥೆಯಿಲ್ಲ ಎಂದು ಒತ್ತಾಯಿಸಿದ್ದರು ಎಂದು ತಿಳಿದುಬಂದಿದೆ.
ಏಕೈಕ ಪುತ್ರಿ: ತಮ್ಮ ಏಕೈಕ ಮಗುವನ್ನು ಕಳೆದಕೊಂಡ ಕಂಗಾಲಾಗಿರುವ ದಂಪತಿಗಳು ಈಗ ಆಸ್ಪತ್ರೆ ಸಿಬ್ಬಂದಿ ವಿರುದ್ದ ದೂರು ನೀಡಲು ನಿರ್ಧರಿಸಿದ್ದಾರೆ. ವೃತ್ತಿಯಿಂದ ಆಟೋಚಾಲಕರಾಗಿರುವ ಸೈಫ್ ಮತ್ತು ಅವರ ಬಂಧುಗಳು ತಮ್ಮ ಮಗುವಿಗೆ ಬಂದ ಪರಿಸ್ಥಿತಿ ಯಾವ ಕೂಸಿಗೂ ಆಗಬಾರದು ಎಂದು ರೋಧಿಸಿದ್ದು, ಆಸ್ಪತ್ರೆಯ ಮುಂದೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
