
ಬೆಳಗಾವಿ
ಜಿಲ್ಲೆಯಲ್ಲಿ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿರುವ ಸುಮಾರು 5.3 ಲಕ್ಷ ಹೆಕ್ಟೇರ್ ಪ್ರದೇಶದ 5.9 ಲಕ್ಷ ರೈತರಿಗೆ ಮೊದಲ ಕಂತಿನ ಬೆಳೆ ಪರಿಹಾರವಾಗಿ ತಲಾ 5,000 ರೂ.ನೀಡಲಾಗುತ್ತಿದೆ. ಇದಕ್ಕಾಗಿ ಸರ್ಕಾರದಿಂದ ಒಟ್ಟು 295 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ರೈತರಿಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಹಣ ಜಮೆ ಮಾಡಲಾಗುವುದು. ಇದು ಮೊದಲನೇ ಕಂತಿನ ಪರಿಹಾರವಾಗಿದೆ ಎಂದರು.
ಮುಂದಿನ ಹಂತದಲ್ಲಿ ಬೆಳೆಗಳ ವರ್ಗೀಕರಣದ ಆಧಾರದ ಮೇಲೆ ಪರಿಹಾರ ಮೊತ್ತವನ್ನು ವಿತರಿಸಲಾಗುವುದು. ಮಳೆ ಆಶ್ರಿತ ಬೆಳೆ, ನೀರಾವರಿ ಬೆಳೆ ಹಾಗೂ ಬಹುವಾರ್ಷಿಕ ಬೆಳೆಗಳೆಂದು ಮೂರು ವಿಭಾಗಗಳಾಗಿ ವಿಂಗಡಿಸಿ, ಪ್ರತಿ ಹೆಕ್ಟೇರ್‌ಗೆ 11,000 ರೂ. ಮತ್ತು 22,000 ರೂ. ಸೇರಿದಂತೆ ನಿಗದಿತ ಮಾನದಂಡಗಳ ಪ್ರಕಾರ ಪರಿಹಾರ ನೀಡಲಾಗುತ್ತದೆ ಎಂದರು.
ಈಗಾಗಲೇ ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮಮಟ್ಟದಲ್ಲಿ ರೈತರಿಗೆ ಬೆಳೆ ವರ್ಗೀಕರಣ ಹಾಗೂ ಪರಿಹಾರದ ಕುರಿತು ಮಾಹಿತಿ ನೀಡಿದ್ದಾರೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ಮೊದಲ ಕಂತಿನಲ್ಲಿ 5,000 ಬಿಡುಗಡೆ ಮಾಡಲಾಗಿದ್ದು, ಮುಂದಿನ ಕಂತಿನ ಪರಿಹಾರವನ್ನು ಬೆಳೆಗಳ ವರ್ಗಕ್ಕೆ ಅನುಗುಣವಾಗಿ ವಿತರಿಸಲಾಗುವುದು ಎಂದರು.
