ಪಾದಯಾತ್ರೆ ಮೂಲಕ ಅಂಜನಾದ್ರಿಗೆ ಬಂದ ಮಾಲಾಧಾರಿಗಳು || ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಅಡುಗೆ ವ್ಯವಸ್ಥೆ||
ಅಂಜನಾದ್ರಿ ಮುಂಭಾಗ, ದ್ವಾರಬಾಗಿಲು, ಪಾದಗಟ್ಟೆ, ಗರ್ಭಗುಡಿ, ದೇವಸ್ಥಾನಕ್ಕೆ ತೆಂಗಿನಗರಿ, ತಾಳೆಗರಿ, ಬಾಳೆದಿಂಡು, ಹೂವಿನ ಸಿಂಗಾರ ಜತೆಗೆ ದೇವಸ್ಥಾನದ ಸುತ್ತಲೂ ವಿದ್ಯುತ್ ಅಲಂಕಾರ, ಮಾಲಾಧಾರಿಗಳಿಗೆ ಭವ್ಯ ಸ್ವಾಗತ
ಕನ್ನಡಮ್ಮ ಸುದ್ದಿ-ಗಂಗಾವತಿ/ಕೊಪ್ಪಳ: ಆಂಜನೇಯ ಸ್ವಾಮಿ ಜನ್ಮಸ್ಥಳ ಅಂಜನಾದ್ರಿಯಲ್ಲಿ ಶುಕ್ರವಾರ ಲಕ್ಷ್ಯಾಂತರ ಹನುಮ ಮಾಲಾಧಾರಿಗಳಿಂದ ಹನುಮಮಾಲ ವಿಸರ್ಜನೆ ಕಾರ್ಯಕ್ರಮ ಸಾಂಗವಾಗಿ ನೇರವೇರಿತು. ಗುರುವಾರದಿಂದಲೇ ಆರಂಭವಾದ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದಲ್ಲಿ ಮಾಲಧಾರಿಗಳು ಬೆಳಂ ಬೆಳಿಗ್ಗೆ ಎಲ್ಲರೂ ನೀರಿನಲ್ಲಿ ಮಿಂದೆದ್ದು ಜಯಘೋಷಗಳನ್ನು ಕೂಗುತ ಸರತಿ ಸಾಲಿನಲ್ಲಿ ನಿಂತು ಆಂಜನೇಯ ಸ್ವಾಮಿಯ ದರ್ಶನ ಪಡೆದು, ಈ ಬಾರಿ ಒಂದು ದಿನ ಮೊದಲೇ ಹನುಮ ವ್ರತದ ಸಮಯದಲ್ಲಿ ತಮ್ಮ ಕೊರಳಲ್ಲಿ ಧರಿಸಿದ್ದ ತುಳಸಿ ಅಥವಾ ಗಂಧದ ಹಾರವನ್ನು ಅಂಜನಾದ್ರಿ ಬೆಟ್ಟದ ಮೇಲೆ ತೆಗೆಯುವ ಮೂಲಕ ವ್ರತ ಪೂರ್ಣಗೊಳಿಸಿದ ಚಿತ್ರಣ ಕಂಡುಬಂತು. ಐತಿಹಾಸಿಕ ಧಾರ್ಮಿಕ ಕ್ಷೇತ್ರ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮದಲ್ಲಿ ಹನುಮ ಮಾಲೆ ವಿಸರ್ಜನೆ ಅಂಗವಾಗಿ ರಾಜ್ಯ ಹಾಗೂ ಹೊರ ರಾಜ್ಯಗಳ ಸಾಕಷ್ಟು ಸಂಖ್ಯೆಯ ಭಕ್ತರು ಅದರಲ್ಲಿಯೂ ಯುವಕರೇ ಹೆಚ್ಚಾಗಿ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಬಂದಿದ್ದರು. ಪ್ರತಿ ವರ್ಷ ನಿರ್ದಿಷ್ಟ ದಿನದಂದು ಮಾತ್ರ ಮಾಲಾಧಾರಿಗಳು ಮಾಲೆ ವಿಸರ್ಜನೆ ಮಾಡಿದರು.
ಜಿಲ್ಲೆ, ಹೊರ ಜಿಲ್ಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪಾದಯಾತ್ರೆ ಮೂಲಕ ಬಂದಂತಹ ಲಕ್ಷಾಂತರ ಹನುಮ ಮಾಲಾಧಾರಣೆ ಮಾಡಿದ ಭಕ್ತರು ಮತ್ತು ಭಕ್ತರಿಗೆ, ಅಧಿಕಾರಿಗಳಿಗೆ ಯಾವುದೇ ಸಮಸ್ಯೆ, ತೊಂದರೆ ಬಂದಲ್ಲಿ, ಮಾಹಿತಿ ನೀಡಿದರೆ ನೆರವಿಗೆ ಧಾವಿಸಿಲು ಅಂಜನಾದ್ರಿ ಪಾದಗಟ್ಟೆ, ಪಾರ್ಕಿಂಗ್ ಸ್ಥಳ, ವೇದಪಾಠ ಶಾಲೆಯ ಬಳಿ ಸೇರಿ ಅಗತ್ಯ ಕಡೆ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ .
ಮಾಲೆ ವಿಸರ್ಜನೆ ಅಂಗವಾಗಿ ಜಿಲ್ಲಾಡಳಿತ ಪಾರ್ಕಿಂಗ್, ತುರ್ತು ಚಿಕಿತ್ಸೆ, ಕುಡಿಯುವ ನೀರು, ಶೌಚಾಲಯ, ಅಗ್ನಿಶಾಮಕ ದಳದ ವ್ಯವಸ್ಥೆ ಸೇರಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಎಲ್ಲಿಯೂ ತೊಂದರೆಯಾಗದಂತೆ ಕ್ರಮ ವಹಿಸಲು ವಿವಿಧ ಸಮಿತಿಗಳನ್ನು ರಚಿಸಿತ್ತು. ಸಮೀಪದ ವಿಜಯನಗರ ಉಪಕಾಲುವೆ, ಪಂಪಾಸರೋವರ, ತುಂಗಭದ್ರಾ ನದಿಪಾತ್ರದಲ್ಲಿ ಸ್ನಾನಮಾಡಿ, ಹನುಮ ಜಪ ಮಾಡುತ್ತಾ ಬೆಟ್ಟ ಏರಿ, ಆಂಜನೇಯನ ದರ್ಶನ ಪಡೆದು, ಕೆಲ ಭಕ್ತರು ಮಾಲೆ ವಿಸರ್ಜಿಸಿದರೆ, ಇನ್ನೂ ಕೆಲ ಭಕ್ತರು ಗುರುವಾರ, ಶುಕ್ರವಾರ ಬೆಳಗಿನ ಮುಹೂರ್ತ ಸಮಯದಲ್ಲಿ ಮಾಲೆ ವಿಸರ್ಜಿಸಿದರು.
ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಉತ್ತಮ ರೀತಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿತ್ತು. ಭಕ್ತರಿಗೆ ಪ್ರಸಾದಕ್ಕಾಗಿ ವೇದಪಾಠ ಶಾಲೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಹುಗ್ಗಿ, ಅನ್ನ, ಸಾಂಬರ್, ಟೊಮಟೊ ಚಟ್ನಿ ಒಳಗೊಂಡ ಪ್ರಸಾದವನ್ನು ಭಕ್ತರು ಸವಿದರು. ಜನರಿಗೆ ನೂಕು ನುಗ್ಗಲು ಆಗದಂತೆ ಹಲವಾರು ಕೌಂಟರಗಳನ್ನು ತೆರೆದಿದ್ದರಿಂದ ಶಾಂತ ರೀತಿಯಲ್ಲಿ ಪ್ರಸಾದ ಸ್ವೀಕಾರ ನಡೆಯಿತು.
ಬಂದೋಬಸ್ತ್: ಪೊಲೀಸ್ ಇಲಾಖೆ ಹುಲಗಿ ಮಾರ್ಗದ ಹಿಟ್ನಾಳ, ಶಿವಪುರ ಕ್ರಾಸ್, ಸಾಣಾಪುರ, ವಿರೂಪಾಪುರಗಡ್ಡೆ, ಹನುಮನ ಹಳ್ಳಿ ಹಾಗೂ ಗಂಗಾವತಿ ಮಾರ್ಗದ ಸಂಗಾಪುರ, ಕಡೆಬಾಗಿಲು, ಆನೆಗೊಂದಿ, ಜಂಗ್ಲಿ ಕ್ರಾಸ್ ಬಳಿ ಬ್ಯಾರಿಕೇಡ್ ಅಳವಡಿಸಿ ಬಿಗಿ ಬಂದೋಬಸ್ತ್ ಕಲ್ಪಿಸಿದೆ. ಮಾಲಾಧಾರಿಗಳ ವಾಹನಗಳಿಗೆ ಮಾತ್ರ ಅಂಜನಾದ್ರಿ ಮಾರ್ಗವಾಗಿ ತೆರಳಲು ಅವಕಾಶ ನೀಡಲಾಗಿದೆ. ಪೊಲೀಸರು ಸರತಿ ಮೇಲೆ ದಿನದ 24 ಗಂಟೆಯೂ ಕರ್ತವ್ಯದಲ್ಲಿ ತೊಡಗಿದ್ದಾರೆ.
ಅಂಜನಾದ್ರಿಗೆ ಲಕ್ಷ್ಯಾಂತರ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಎಲ್ಲಾ ರೀತಿಯ ಸೌಕರ್ಯಗಳ ವ್ಯವಸ್ಥೆಯನ್ನು ಕಲ್ಪಿಸಿತ್ತು. ಕುಡಿಯುವ ನೀರು, ಸ್ನಾನಗೃಹಗಳು, ವಾಹನಗಳಿಗೆ ಪಾರ್ಕಿಂಗ್, ಪ್ರಸಾದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಸಹಾಯವಾಣಿ, ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜನೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿತ್ತು.
ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಅದರ ಕೆಳಗಡೆ ಇರುವ ಪಾದಗಟ್ಟಿಯಲ್ಲಿ ಹೂವಿನ ಅಲಂಕಾರ ಕಳೆದ ವರ್ಷಕ್ಕಿಂತಲೂ ಈ ವರ್ಷ ಚೆನ್ನಾಗಿ ಮಾಡಲಾಗಿತ್ತು. ಅಂಜನಾದ್ರಿ ಬೆಟ್ಟಕ್ಕೆ ವಿವಿಧ ಬಣ್ಣಗಳ ಲೈಟಿಂಗ್ ವ್ಯವಸ್ಥೆ ಮಾಡಿದ್ದರಿಂದ ಬೆಟ್ಟವು ರಾತ್ರಿ ಕಂಗೊಳಿಸುತ್ತಿತ್ತು.
