ಕನ್ನಡಮ್ಮ ಸುದ್ದಿ-ಕಾರಟಗಿ : ಜಿಲ್ಲೆಯ ಶಾಲೆಯೊಂದರಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಶಾಲಾ ಸಿಬ್ಬಂದಿಯ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ತಾಲೂಕಿನ ವಸತಿ ಶಾಲೆಯೊಂದರಲ್ಲಿ ಅಡುಗೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೂಬ್ಬನು ಮಕ್ಕಳಿಗೆ ಕಿರುಕುಳ ನೀಡುವುದು ಮತ್ತು “ಬ್ಯಾಡ್ ಟಚ್” ಮಾಡುತ್ತಿದ್ದಾನೆಂದು ತಿಳಿಸಿ, ಮಕ್ಕಳ ಸಲಹಾ ಪೆಟ್ಟಿಗೆಯಲ್ಲಿ ಹಾಕಿದ್ದು, ಸಲಹಾ ಪೆಟ್ಟಿಗೆಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಈ ಮಾಹಿತಿಯು ಶಾಲಾ ಮುಖ್ಯೋಪಾಧ್ಯಾಯರಿಗೆ ತಿಳಿದುಬಂದಿರುತ್ತದೆ. ತಕ್ಷಣವೇ ಮುಖ್ಯೋಪಾಧ್ಯಾಯರು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಆ ಶಾಲೆಯ ಅಡುಗೆ ಸಹಾಯಕನ ವಿರುದ್ಧ ಡಿಸೆಂಬರ್ 23 ರಂದು ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ಶಾಲೆಯಲ್ಲಿ “ಮಕ್ಕಳ ಸುರಕ್ಷತಾ ನೀತಿ-2016 ಪರಿಷ್ಕಕೃತ-2023”ನ್ನು ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಅದರನ್ವಯ ಸಿಬ್ಬಂದಿಗಳಿಂದ ಮಕ್ಕಳ ಸುರಕ್ಷತೆಯ ಬಗ್ಗೆ “ಬದ್ಧತಾ ಪತ್ರ” “ಸಿಬ್ಬಂದಿಗಳ ಪೊಲೀಸ್ ಪರಿಶೀಲನೆ”, ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ಸುರಕ್ಷತಾ ನೀತಿ” “ಸಲಹಾ ಪೆಟ್ಟಿಗೆ”ಯನ್ನು ಅಳವಡಿಸುವುದು, ಸಂಸ್ಥೆಯನ್ನು “ಸಿ.ಸಿ.ಟ್ಹಿ.ವಿ” ಸರ್ವೆಲೆನ್ಸ್ಗೆ ಅಳವಡಿಸುವುದು,
ಸಂಸ್ಥೆಯಲ್ಲಿ “ಮಕ್ಕಳ ಸಹಾಯವಾಣಿ-1098” ಕುರಿತು ಶಾಶ್ವತ ಗೋಡೆ ಬರಹವನ್ನು ಬರೆಯಿಸುವುದು, “ಪೋಷಕರ ಸಭೆ”ಗಳನ್ನು ನಡೆಸುವುದು “ಪ್ರತಿ ಸಂಸ್ಥೆಯ ಸುರಕ್ಷತಾ ನೀತಿ”ಅಳವಡಿಸಿಕೊಳ್ಳುವುದು ಹಾಗೂ ಮಕ್ಕಳಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಪರವಾದ ಕಾನೂನುಗಳ ಕುರಿತು ಜಾಗೃತಿಯನ್ನು ಮೂಡಿಸುವುದು ಕಡ್ಡಾಯವಾಗಿರುತ್ತದೆ.
ಇದರಿಂದ ಮಕ್ಕಳು ತಮ್ಮ ಮೇಲಾಗುವ ಯಾವುದೇ ಹಲ್ಲೆ, ದೌರ್ಜನ್ಯ, ಕಿರುಕುಳಗಳನ್ನು ಮತ್ತು ದೂರುಗಳನ್ನು ಹೇಳಿಕೊಳ್ಳಲು ಅವಕಾಶ ಲಭ್ಯವಾಗುವುದರಿಂದ, ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲು ಸಾಧ್ಯ.ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಪ್ರತಿ ಶೈಕ್ಷಣಿಕ ಸಂಸ್ಥೆಗಳು “ಮಕ್ಕಳ ಸುರಕ್ಷತಾ ನೀತಿ-2016 ಪರಿಷ್ಕಕೃತ-2023”ನ್ನು ಅಳವಡಿಸಿಕೊಳ್ಳುವಂತೆ ಹಾಗೂ ಮಕ್ಕಳಿಗೆ “ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ”ದ ಬಗ್ಗೆ ಕಡ್ಡಾಯವಾಗಿ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
