ಸಂವಿಧಾನ ಮೀಸಲಾತಿಗಷ್ಟೇ ಸೀಮಿತವಲ್ಲ’ ಸಚಿವ ಸಂತೋಷ್ ಲಾಡ್ || *ಕಾಂಗ್ರೆಸ್ ಪಕ್ಷದ ಎಸ್ಸಿ, ಎಸ್ಟಿ, ಒಬಿಸಿ ಘಟಕದಿಂದ ಸಂವಿಧಾನ ರಕ್ಷಣಾ ಅಭಿಯಾನ ಕಾರ್ಯಕ್ರಮ
ಕನ್ನಡಮ್ಮ ಸುದ್ದಿ-ಕೊಪ್ಪಳ: ಸಂವಿಧಾನ ಎಂದಾಕ್ಷಣ ಎಸ್ಸಿ, ಎಸ್ಟಿ ಮತ್ತು ಮೀಸಲಾತಿ ಎನ್ನುತ್ತಾರೆ. ಅಂಬೇಡ್ಕರ್ ಹಿಂದೂ ಸಮಾಜದಲ್ಲಿ ಹುಟ್ಟಿದವರು. ಅವರು ದೇಶದ ಎಲ್ಲ ಗ್ರಂಥಗಳನ್ನು ಹಾಗೂ ಪುರಾಣಗಳನ್ನು ಓದಿಯೇ ಸಂವಿಧಾನ ಬರೆದಿದ್ದಾರೆ. ಅಂಬೇಡ್ಕರ್ ಲೋಕಸಭೆಗೆ ಬರಲು ಮುಸ್ಲಿಂ ಲೀಗ್ ಪಾರ್ಟಿ ಕಾರಣವಾಗಿತ್ತು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದಲ್ಲಿ ಕಾಂಗ್ರೆಸ್ ಪಕ್ಷದ ಎಸ್ಸಿ, ಎಸ್ಟಿ, ಒಬಿಸಿ ಘಟಕದ ವತಿಯಿಂದ ನಡೆದ ಸಂವಿಧಾನ ರಕ್ಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಾತಿ ಪಡೆಯಲು ಮಾತ್ರ ಸೀಮಿತ ಎನ್ನುವ ತಪ್ಪು ಮನೋಭಾವನೆಯಿಂದ ಹೊರಬರಬೇಕು ಎಂದರು.
ವಿಧಾನಪರಿಷತ್ ಸದಸ್ಯೆ ಬಿಲ್ಕೀಸ್ ಬಾನು ಮಾತನಾಡಿ, ಸಂವಿಧಾನದಿಂದ ಮಾತ್ರ ಸಮಾಜದ ಉಳಿವು ಸಾಧ್ಯ. ಸಂವಿಧಾನವನ್ನು ಭಾರತದ ಬೈಬಲ್ ಎಂದು ಕರೆಯುತ್ತಾರೆ. ಬಿಜೆಪಿಯವರು ಸ್ವಾರ್ಥ ಸಾಧನೆಗೆ ದೇಶದ ನೆಲಕ್ಕೆ, ಹಿಂದೂಸ್ಥಾನಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ ಅವರು. ರಾಮ ನಮ್ಮ ಆತ್ಮದಲ್ಲಿದ್ದಾನೆ. ಬಹಳಷ್ಟು ಮುಸಲ್ಮಾನರು ರಾಮಮಂದಿರಕ್ಕೆ ಇಟ್ಟಿಗೆ ನೀಡಿದ್ದಾರೆ. ಧರ್ಮ ಆತ್ಮಶುದ್ಧೀಕರಣಕ್ಕಿರುವ ದಾರಿ. ಅದು ಪ್ರದರ್ಶನಕ್ಕಿರುವ ವಸ್ತುವಲ್ಲ. ರಸ್ತೆಯ ಮೇಲೆ ಹೋಗಿ ಚರ್ಚ್ಗೆ ಹೋಗಬೇಡಿ, ಪ್ರಾರ್ಥನೆ ಮಾಡಬೇಡಿ ಎನ್ನುವುದು ಸಂವಿಧಾನ ವಿರೋಧಿ. ಹೀಗೆ ಮಾತನಾಡುವವರಿಗೆ ತಕ್ಕ ಪಾಠ ಕಲಿಸಿ’ ಎಂದು ಅವರು ಹೇಳಿದರು.
ಸಂಸದ ಕೆ.ರಾಜಶೇಖರ ಹಿಟ್ನಾಳ ‘ನಾವು ಸಂವಿಧಾನ ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಣೆ ಮಾಡುತ್ತದೆ. ಅಂಬೇಡ್ಕರ್ ಅವರು ಎಲ್ಲರ ಮನಸ್ಸಿನಲ್ಲಿಯೂ ಇದ್ದಾರೆ. ಬಿಜೆಪಿಯವರ ಕುತಂತ್ರ ವಿರೋಧಿಸಿದರೆ ಮಾತ್ರ ಸಂವಿಧಾನ ಉಳಿಯುತ್ತದೆ’ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ಸಂವಿಧಾನದಿಂದ ಮಾತ್ರ ಸಮಬಾಳು ಸಾಧ್ಯ. ಸಂವಿಧಾನ ಬದಲಾವಣೆ ಮಾಡಲು ಬಂದಿದ್ದೇವೆ ಎನ್ನುವ ಬಿಜೆಪಿಯವರಿಗೆ ಚುನಾವಣಾ ಸಮಯದಲ್ಲಿ ತಕ್ಕ ಪಾಠ ಕಲಿಸಿ ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಸೈಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಸಿರಾಜ್ ಇರ್ಷಾದ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಗ್ಯಾರಂಟಿ ಯೋಜನೆ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ಮುಖಂಡರಾದ ಕಾಟನ್ ಪಾಷಾ, ಕೆ.ಎಂ.ಸೈಯ್ಯದ್, ಗೂಳಪ್ಪ ಹಲಗೇರಿ, ಟಿ.ರತ್ನಾಕರ, ಗಾಳೆಪ್ಪ ಪೂಜಾರ ಇತರರು ಇದ್ದರು.
ಸಂವಿಧಾನವನ್ನು ಬಿಜೆಪಿಯವರು ಸರಿಯಾಗಿ ಓದಿಲ್ಲ. ಸಂವಿಧಾನ, ಅಂಬೇಡ್ಕರ್ ಹೆಸರು ಮುಂದಿಟ್ಟುಕೊಂಡು ಮತ ಗಳಿಸಿಕೊಳ್ಳಬಹುದು ಎಂದು ಬಿಜೆಪಿಯವರು ಜನರ ಮನಸ್ಸು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಎಂಬ ಪದ ಸಂವಿಧಾನದಲ್ಲಿ ಬರಲು ಅಂಬೇಡ್ಕರ್ ಕಾರಣರಾಗಿದ್ದಾರೆ : ಸಂತೋಷ್ ಲಾಡ್, ಕಾರ್ಮಿಕ ಸಚಿವರು
