*ಅಕ್ರಮ ಮರಳು ದಾಸ್ತಾನು, ವಾಹನ ಜಪ್ತಿ, ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕನ್ನಡಮ್ಮ ಸುದ್ದಿ-ಕೊಪ್ಪಳ : ತಾಲೂಕಿನ ಹಿರೇಸಿಂದೋಗಿ ಗ್ರಾಮ ವ್ಯಾಪ್ತಿಯ ಹಿರೇಹಳ್ಳದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯ ಮೇಲೆ ದಾಳಿ ನಡೆಸಿ ಅಕ್ರಮ ಮರಳು ದಾಸ್ತಾನು, ವಾಹನವನ್ನು ಜಪ್ತಿ ಮಾಡಿಕೊಂಡು ಪ್ರಕರಣವನ್ನು ದಾಖಲಿಸಲಾಗಿದೆ ಹಿರಿಯ ಭೂವಿಜ್ಞಾನಿ ರೀಯಾಜ್ ಅವರು ತಿಳಿಸಿದ್ದಾರೆ.
ಅಕ್ರಮ ಮರಳು ದಂದೆ ನಡೆಯುತ್ತಿರುವ ಬಗ್ಗೆ ಅಧಿಕೃತ ಮಾಹಿತಿ ಮೇರೆಗೆ ಜ. 24, ಶುಕ್ರವಾರದಂದು ಹಿರಿಯ ಭೂ ವಿಜ್ಞಾನಿ ರೀಯಾಜ, ಭೂ ವಿಜ್ಞಾನಿ ನಾಗರಾಜ, ಕಿರಿಯ ಅಭಿಯಂತರ ನವೀನ್ ಕುಮಾರ , ಸಹಾಯಕ ಅಭಿಯಂತರ ಬಸವರಾಜ ಪಾರ್ಥಿ, ಹಾಗೂ ಸಿಬ್ಬಂದಿಗಳ ತಂಡವು ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಹಿಟಾಚಿ ವಾಹನವನ್ನು ಹಾಗೂ ಮರಳು ದಾಸ್ತನುವನ್ನು ಜಪ್ತು ಪಡಿಸಿಕೊಂಡು, ಮರಳನ್ನು ನೀರಿನಿಂದ ತೊಳೆಯಲು ರಚಿಸಿಕೊಂಡಿದ್ದಂತಹ ಟ್ಯಾಂಕ್ ತರಹದ ರಚನೆಗಳನ್ನು ನಾಶಪಡಿಸಿ, ಅಳವಂಡಿ ಪೊಲೀಸ್ ಠಾಣೆಯಲ್ಲಿ ಬಿ ಎನ್ ಎಸ್ 2023 ರಡಿಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ.
ಅಕ್ರಮವಾಗಿ ದಾಸ್ತಾನಿರುವ ಮರಳನ್ನು ನಿಯಮಾನುಸಾರ ವಿಲೇವಾರಿ ಮಾಡಲು ಕ್ರಮವಹಿಸಲಾಗುವುದು. ಇನ್ನು ಮುಂದೆ ಯಾವುದೇ ಅಕ್ರಮ ಮರಳು ಚಟುವಟಿಕೆಗಳು ನಡೆಯದಂತೆ ನಿಗಾವಹಿಸಲಾಗುತ್ತಿದೆ. ಒಂದೊಮ್ಮೆ ಅಕ್ರಮ ಮರಳು ಗಣಿಗಾರಿಕೆ ಮಾಡಲು ಯತ್ನಿಸಿದ್ದಲ್ಲಿ ಅಂತವರ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮವನ್ನು ವಹಿಸಲಾಗುವುದು. ಜಿಲ್ಲೆಯಲ್ಲಿ ಯಾವುದೇ ತರಹದ ಅಕ್ರಮ ಗಣಿಗಾರಿಕೆ, ಸಾಗಾಣಿಕೆಯನ್ನು ತಡೆಗಟ್ಟುವಲ್ಲಿ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿದೆ ಹಿರಿಯ ಭೂವಿಜ್ಞಾನಿ ರೀಯಾಜ್ ಅವರು ಹೇಳಿದ್ದಾರೆ.
