*ಪತ್ರಕರ್ತರು, ಪೌರಸೇವಾ ನೌಕರರ ಫಲಾನುಭವಿಗಳಿಗೆ ನಿವೇಶನ ಹಕ್ಕು-ಪತ್ರಗಳ ವಿತರಣೆ
ಕನ್ನಡಮ್ಮ ಸುದ್ದಿ-ಕೊಪ್ಪಳ : ಜನಪರವಾಗಿ ನಾವು ಒಳ್ಳೆಯ ಕೆಲಸ ಮಾಡಿದರೆ ಜನ ನಮಗೆ ಎಂದೂ ಕೈ ಬಿಡುವುದಿಲ್ಲ ಎಂದು ವಸತಿ. ವಕ್ಪ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ. ಜೆಡ್. ಜಮೀರ್ ಅಹ್ಮದ್ ಖಾನ್ ಹೇಳಿದರು. ನಗರಸಭೆ ವತಿಯಿಂದ ಭಾನುವಾರ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರು ಹಾಗೂ ಪೌರಸೇವಾ ನೌಕರರ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕು-ಪತ್ರಗಳನ್ನು ವಿತರಣೆಮಾಡಿ ಮಾತನಾಡಿದರು.
ಮಾಧ್ಯಮ ಸ್ನೇಹಿತರು ಹಾಗೂ ಪೌರ ಸೇವಾ ಕಾರ್ಮಿಕರ ಹಕ್ಕು-ಪತ್ರಗಳ ವಿತರಣೆಯ ಹತ್ತು ವರ್ಷಗಳ ಕನಸು ಈಗ ನನಸಾಗಿದೆ. ಅವರಿಗೆ ಸೈಟ್ ಕೊಟ್ಟರೆ ಸಾಲದು ಕುಡಿಯುವ ನೀರಿನ ವ್ಯವಸ್ಥೆ. ಎಲೆಕ್ಟ್ರಸಿಟಿ ಆಗಬೇಕು ಅಂದಾಗ ಸೈಟ್ ನೀಡಿದ್ದಕ್ಕು ಸಾರ್ಥಕ ಆಗುತ್ತದೆ ಮತ್ತು ಅದರ ಉಪಯೋಗ ಸಹ ಆಗುತ್ತದೆ. ಇದಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಯಿಂದ ಸ್ವಲ್ಪ ಹಣ ನೀಡಿ ನನ್ನ ಇಲಾಖೆಯಿಂದಲು ಅನುದಾನ ಕೊಡುತ್ತೆನೆ ಎಂದು ಕೊಪ್ಪಳ ಶಾಸಕರಿಗೆ ಹೇಳಿದರು.
ನಮ್ಮ ಇಲಾಖೆಯಿಂದ ಮನೆ ಇಲ್ಲದವರ ಸರ್ವೆಯನ್ನು ಮಾಡಿಸಿದ್ದೆವೆ. ನಾವು ಯಾವುದೇ ಜಾತಿ ಬೇದ ಮಾಡದೆ ಎಲ್ಲಾ ಬಡ ಜನರಿಗೆ ಮನೆಗಳನ್ನು ಕೊಡುತ್ತಿದ್ದೆವೆ. ಸನ್ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಒಂದು ತಿಂಗಳಲ್ಲಿ ಬಡವರಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರು. ಕಳೆದ ವರ್ಷ ಫೆಬ್ರುವರಿಯ 36,780 ಮನೆಗಳನ್ನು ರಾಜ್ಯದ ಬಡವರಿಗೆ ಕೊಟ್ಟಿದ್ದೆವೆ ಎಂದು ಹೇಳಿದರು.
ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಹಕ್ಕುಗಳನ್ನು ಸಿಗಲಿ ಎಂದು ಮೂರು ವರ್ಷಗಳ ಕಾಲ ಶ್ರಮ ಪಟ್ಟು ಸಂವಿಧಾನ ರಚಿಸಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ಸಿಗುವ ಹಾಗೆ ಮಾಡಿದರು. ಅಂಬೇಡ್ಕರ್ ದಲಿತ ಮುಖಂಡ ಮಾತ್ರವಲ್ಲ ಅವರೊಬ್ಬ ಮಾಹನ್ ವ್ಯಕ್ತಿ ಎಲ್ಲಾ ಸಮಾಜದ ನಾಯಕರಾಗಿದ್ದಾರೆ. ಹಿಂದು. ಮುಸ್ಲಿಂ. ಶಿಖ್. ಇಸಾಯಿ ನಾವೆಲ್ಲರೂ ಸಹೋದರರು ಈ ದೇಶಕೊಸ್ಕರ ನಾವೆಲ್ಲರೂ ಒಟ್ಟಾಗಿ ಬಾಳಬೇಕಿದೆ ಎಂದು ಹೇಳಿದರು.

ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಹಾಗೂ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಪತ್ರಕರ್ತರು ಹಾಗೂ ಪೌರ ಸೇವಾ ನೌಕರ ಫಲಾನುಭವಿಗಳಿಗೆ ಸಾಂಕೇತಿಕವಾಗಿ ನಿವೇಶನ ಹಕ್ಕು-ಪತ್ರಗಳ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ ರಾಯರೆಡ್ಡಿ, ರಾಜ್ಯ ವಕ್ಪ್ ಬೋರ್ಡ್ ಅಧ್ಯಕ್ಷ ಕೆ.ಅನ್ವರ ಭಾಷಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್ ಗುಪ್ತಾ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎನ್.ಎಫ್ ಇಮಾಮ್ ನಿಯಾಜಿ, ಕೊಪ್ಪಳ ನಗರಸಭೆ ಉಪಾಧ್ಯಕ್ಷರಾದ ಅಶ್ವಿನಿ ಭಗತ್ ಗದುಗಿನಮಠ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಕ್ಬರ ಪಾಶಾ ಪಲ್ಟನ್,
ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಹಳ್ಳಿಕೇರಿ, ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷರಾದ ರವಿಂದ್ರ ವಿ.ಕೆ., ಕೊಪ್ಪಳ ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ನಗರಸಭೆ ಹಾಗೂ ಸ್ಥಾಯಿ ಸಮಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.
