
ಬೆಳಗಾವಿ
ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಅವರಿಗೆ ಮುಖ್ಯಮಂತ್ರಿಯಾಗ ಸಾಮಥ್ರ್ಯ ಇರುವ ವ್ಯಕ್ತಿ. ಹೈಕಮಾಂಡ್ ಎದುರು ಹಾಕಿಕೊಂಡು ತನ್ನ ರಾಜಕೀಯ ಜೀವನ ಹಾಳು ಮಾಡಿಕೊಂಡರು ಎಂದು ಮಾಜಿ ಶಾಸಕ ಸಂಜಯ ಪಾಟೀಲ್ ಯತ್ನಾಳ ಪರ ಬ್ಯಾಟ್ ಬಿಸಿದರು.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮನೆಯ ಜಗಳ ಮನೆಯ ಹಿರಿಯ ಜೊತೆಗೆ ಚರ್ಚೆ ಮಾಡಬೇಕು. ಅದನ್ನು ಬಹಿರಂಗವಾಗಿ ಟೀಕೆ ಮಾಡಬಾರದು. ಯತ್ನಾಳ ಅವರಿಗೆ ಬಹಳ ಪ್ರೀತಿ ಮಾಡುತ್ತೇನೆ. ನಾನು ಅವರು ತಪ್ಪು ಮಾತನಾಡುತ್ತಾರೋ ಸರಿ ಮಾತನಾಡುತ್ತಾರೋ ಚರ್ಚೆ ಮಾಡುವುದಿಲ್ಲ. ಆದರೆ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ತಲೆ ಬಾಗಬೇಕು. ಹೈಕಮಾಂಡ್ ದೇವರಲ್ಲ. ಮನೆಯ ಹಿರಿಯರು. ಅವರ ಮುಂದೆ ಚರ್ಚೆ ಮಾಡಬೇಕಿತ್ತು ಎಂದರು.
ಹಿಂದುತ್ವ ಎಂದರೆ ಬಿಜೆಪಿ. ಬಸನಗೌಡ ಪಾಟೀಲ್ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಅದರಲ್ಲಿ ಎರಡೂ ಮಾತಿಲ್ಲ. ಯತ್ನಾಳ ಪರ ಎಷ್ಟೋ ಮಂದಿ ತಂಡ ಇದೆ. ಅವರ ಮೇಲೆ ಕ್ರಮ ಯಾಕೆ ಆಗಲಿಲ್ಲ. ಯತ್ನಾಳ ಮೇಲೆ ಏಕೆ ಆಯಿತು. ಚರ್ಚೆ ಮಾಡಬೇಕಲ್ವಾ ಎಂದ ಅವರು, ಇಂದಿಲ್ಲ ನಾಳೆ ಮುಖ್ಯಮಂತ್ರಿಯಾಗುವ ಭವಿಷ್ಯ ಇತ್ತು. ಪಂಚಮಸಾಲಿ ಲಿಂಗಾಯತ ಸಮಾಜದ ದೊಡ್ಡ ನಾಯಕ. ಇಂದಲ್ಲಾ ನಾಳೆ ಮುಖ್ಯಮಂತ್ರಿಯಾಗುವ ಲಕ್ಷಣ ಇತ್ತು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಯತ್ನಾಳ ಒಳ್ಳೆಯ ನಾಯಕ. ಹಿಂದು ಪರ ಹೋರಾಟಗಾರ. ಅವರಿಗೆ ಒಳ್ಳೆಯ ಭವಿಷ್ಯ ಇತ್ತು. ಆದರೆ ಅವರ ಮಾತೇ ಅವರಿಗೆ ಮುಳ್ಳಾಯಿತು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 21 ತಿಂಗಳು ಕಳೆದರೂ ಅಭಿವೃದ್ಧಿಯಾಗಿಲ್ಲ. ಗ್ಯಾರಂಟಿ ಕೊಡುತ್ತೇವೆ ಎಂದು ಹೇಳಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಗ್ಯಾರಂಟಿ ಹೆಸರಿನಲ್ಲು ಲೂಟಿ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾದ ಬಳಿಕ ಸರಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಕ್ಕಾಗಿ ಸರಕಾರದ ಒಳಗೊಳಗೆ ಹಪಾಹಪಿ ನಡೆಸುತ್ತಿದ್ದಾರೆ. ಹನಿ ಟ್ರ್ಯಾಪ್ ಆಗಿದೆ ಎಂದು ಸಚಿವರೇ ಆರೋಪ ಮಾಡಿದ್ದಾರೆ. ಇದೊಂದು ದುರಾಡಳಿತದ ಪರಮಾವಧಿ ಎಂದರು.
ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಚರ್ಚೆ ಜೋರಾಗಿ ನಡೆದಿದೆ. ಇದರಿಂದ ಅಭಿವೃದ್ಧಿ ಕಡೆಗೆ ಗಮನ ಕೊಡಲು ಸರಕಾರಕ್ಕೆ ಆಗುತ್ತಿಲ್ಲ. ಈ ಸರಕಾರದಲ್ಲಿ ಕೆಲಸವಾಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಮಾತನಾಡುತ್ತಿದ್ದಾರೆ ಎಂದರು.
