
ಇ
ನಿಪ್ಪಾಣಿ :
ನಿಪ್ಪಾಣಿ ಪುರಸಭೆಯ ನೂತನ ಆಯುಕ್ತರಾಗಿ ಭಾಗ್ಯಶ್ರೀ ಹೂಗಿ ಅವರನ್ನು ನೇಮಕ ಮಾಡಲಾಗಿದೆ. ಶನಿವಾರ ರಾತ್ರಿ ಹೂಗಿಯವರ ನೇಮಕದ ಆದೇಶ ಹೊರಬಿದ್ದಿದೆ. ಭಾಗ್ಯಶ್ರೀ ಹೂಗಿಯವರು ನಿಪ್ಪಾಣಿ ಪುರಸಭೆಯ ಮೊದಲ ಮಹಿಳಾ ಆಯುಕ್ತರು ಎಂದು ಹೇಳಲಾಗಿದೆ. ಮಂಗಳವಾರ ಬೆಳಗ್ಗೆ ಭಾಗ್ಯಶ್ರೀ ಹೂಗಿ ಅವರು ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಹಿಂದಿನ ಆಯುಕ್ತರಾಗಿದ್ದ ಡಿ.ಎಸ್. ಹರದಿ ಅವರು ಮೇ 31ರಂದು ನಿವೃತ್ತಿಯಾಗಿರುವುದರಿಂದ ಕಂದಾಯ ನಿರೀಕ್ಷಕ ವಿವೇಕ್ ಜೋಶಿ ಅವರ ಬಳಿ ಆಯುಕ್ತರ ಹುದ್ದೆಯ ಪ್ರಭಾರ ಇತ್ತು. ವಾಸ್ತವವಾಗಿ, ಕಮಿಷನರ್ ಹರದಿ ಅವರ ನಿವೃತ್ತಿಯ ಮುಂಚೆಯೇ ನಿಪ್ಪಾಣಿ ಪುರಸಭೆಯ ಆಯುಕ್ತರಾಗಲು ಅನೇಕ ಅಧಿಕಾರಿಗಳು ಆಸಕ್ತಿ ಹೊಂದಿದ್ದರು. ಇದರಿಂದಾಗಿ ನೂತನ ಆಯುಕ್ತರು ಯಾರಾಗುತ್ತಾರೆ ಎಂಬ ಕುತೂಹಲ ನಗರವಾಸಿಗಳಲ್ಲಿ ಮೂಡಿತ್ತು. ಹೂಗಿ ಈ ಹಿಂದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ (ಪಿಡಿಒ) ಕೆಲಸ ಮಾಡಿದ್ದಾರೆ. ಸದಲಗಾ ನಗರ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಉಪ ಆಯುಕ್ತರಾಗಿ ಕೆಲಸ ಮಾಡಿದ್ದಾರೆ.
ನಿಪ್ಪಾಣಿ ಪುರಸಭೆಯ ಆಯುಕ್ತರ ಹುದ್ದೆಯು ಗ್ರೇಡ್-2 ಹುದ್ದೆಯಾಗಿದೆ. ಹೀಗಾಗಿ ಅದಕ್ಕೆ ಅರ್ಹತೆ ಇರುವುದರಿಂದ ಅವರನ್ನು ಆಯುಕ್ತರನ್ನಾಗಿ ನೇಮಿಸಲಾಗಿದೆ. ಆಡಳಿತದಲ್ಲಿ ಗಟ್ಟಿಯಾದ ಹಿಡಿತ ಹೊಂದಿರುವ ಅಧಿಕಾರಿ ಎಂದೇ ಹೆಸರುವಾಸಿ. ನಿಪ್ಪಾಣಿ ಅಶೋಕನಗರ ಬಯಲು ಬಹಿರ್ದೆಸೆ ಪ್ರಕರಣ ಇನ್ನೂ ಮುಂದುವರಿದಿದ್ದು, ನೂತನ ಆಯುಕ್ತರು ಬಂದು ಉಸ್ತುವಾರಿ ವಹಿಸಬೇಕು. ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಜನರ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗುವುದು ಎಂದು ನಿಪ್ಪಾಣಿಯ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ವರದಿ ;
ನಾಗೇಶ ಪೂಜಾರಿ
ನಿಪ್ಪಾಣಿ.
