
ಬೀದರ್
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿಸಚಿವ, ಅಖಿಲ ಭಾರತ ವೀರಶೈವ ಮಹಾಸಭೆ ಮಾಜಿ ಅಧ್ಯಕ್ಷ, ಶತಾಯುಷಿ ಭೀಮಣ್ಣ ಖಂಡ್ರೆ (102) ಶುಕ್ರವಾರ ಇಲ್ಲಿನ ಅವರ ಸ್ವಗೃಹದಲ್ಲಿ ನಿಧನರಾದರು.
ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೊರ್ಟಾ(ಬಿ) ಗ್ರಾಮದಲ್ಲಿ 1923ರ ಜನವರಿ 8ರಂದು ತಂದೆ ಶಿವಲಿಂಗಪ್ಪ, ತಾಯಿ ಪಾರ್ವತಿ ಬಾಯಿ ಅವರ ಮಗನಾಗಿ ಜನಿಸಿದರು. ಭೀಮಣ್ಣ ಖಂಡ್ರೆ ಅವರು ಲಕ್ಷ್ಮಿಬಾಯಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಮೂವರು ಪುತ್ರರು, ಐವರು ಪುತ್ರಿಯರಿದ್ದಾರೆ.
1953ರಲ್ಲಿ ಭಾಲ್ಕಿ ಪುರಸಭೆ ಅಧ್ಯಕ್ಷರಾಗಿ ರಾಜಕೀಯ ಕ್ಷೇತ್ರಕ್ಕೆ ದುಮುಕಿದ ಭೀಮಣ್ಣ ಖಂಡ್ರೆ ಅವರು 1962, 1967, 1978 ಮತ್ತು 1983ರಲ್ಲಿ ನಾಲ್ಕು ಬಾರಿ ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1980ರಲ್ಲಿ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾಗಿ, 1988ರಲ್ಲಿ ಬೀದರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. 1992ರಲ್ಲಿ ಮೊಯ್ಲಿ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಸಾರಿಗೆ ಸಚಿವರಾಗಿದ್ದರು. 1994 ಹಾಗೂ 2000ರಲ್ಲಿ ಎರಡು ಸಲ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದರು. ಅದಾದ ಬಳಿಕ 2005ರಲ್ಲಿ ಮರು ಆಯ್ಕೆಯಾಗಿ 2011ರವರೆಗೆ 12 ವರ್ಷ ಕಾಲ ಸುದೀರ್ಘವಾಗಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
