
ಬೆಳಗಾವಿ
ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಜರುಗಿದ 98ನೇ ಸುವಿಚಾರ ಸಂಭ್ರಮದಲ್ಲಿ ನೂಲ ಸುರಗೀಶ್ವರಮಠ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಿಂದ ಪ್ರವಚನ ಭಾಸ್ಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನೂಲ ಗುರುಸಿದ್ದೇಶ್ವರ ಸ್ವಾಮೀಜಿ, ಇವತ್ತು ನನಗೆ ಪ್ರವಚನ ಭಾಸ್ಕರ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ. ನನ್ನ ಜೀವನದಲ್ಲಿ ಚಂದ್ರಶೇಖರ ಎನ್ನುವ ಪದ ಬಹಳಷ್ಟು ಬೆಳಕನ್ನು ನೀಡಿರುವ ಪದ. ನಾನು ಶ್ರೀಶೈಲದ ಗುರುಕುಲದಲ್ಲಿ ಓದಿದ್ದೇನೆ. ನನಗೆ ವಿಧ್ಯಾ ಗುರುಗಳು ಕೂಡ ಅಲ್ಲಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ. ಹಾಗೆಯೇ ನನ್ನ ಹಿರಿಯ ಗುರುಗಳು ಅವರ ಹೆಸರು ಕೂಡ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ. ಇಂದು ನನಗೆ ಪ್ರವಚನ ಭಾಸ್ಕರ ಪ್ರಶಸ್ತಿ ನೀಡಿದವರು ಕೂಡ ಹುಕ್ಕೇರಿ ಹಿರೇಮಠದ ಸಂಸ್ಥಾನದ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರು ಆದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಗಿದ್ದಾರೆ. ನನ್ನ ಜೀವನದಲ್ಲಿ ಇಚ್ಚಾ, ಜ್ಞಾನ, ಕ್ರೀಯಾ ಶಕ್ತಿಗಳು ಸ್ಪೂರ್ತಿ ನೀಡಿವೆ ಎಂದರು.
ಸಾನಿದ್ಯ ವಹಿಸಿ ಮಾತನಾಡಿದ ಬೆಳಗಾವಿ ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಮಾತನಾಡಿ, ನೂಲ ಸುರಗೀಶ್ವರ ಮಠ ಬಹಳಷ್ಟು ಪುರಾತನ ಮಠ. ರಂಭಾಪುರಿ ಪೀಠದ ಶಾಖಾ ಮಠವಾದ ನೂಲ ಸುರಗೀಶ್ವರ ಮಠಕ್ಕೆ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಮಠದ ಪರಂಪರೆಯನ್ನು ಉಳಿಸಿದ್ದಾರೆ. ಕನ್ನಡ, ಹಿಂದಿ, ಮರಾಠಿ, ತೆಲುಗು ಭಾಷೆಯಲ್ಲಿ ಪ್ರವಚನ ಮಾಡುವ ಪೂಜ್ಯರು ಹುಕ್ಕೇರಿ ಸಂಸ್ಥಾನದಿಂದ ಪ್ರವಚನ ಭಾಸ್ಕರ ಪ್ರಶಸ್ತಿ ಪಡೆದಿರುವುದು ಅಭಿನಂಧನೀಯ ಎಂದರು.
ಪ್ರಶಸ್ತಿ ನೀಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಾಧನೆ ಮಾತು ಆಗಬೇಕು. ಮಾತನಾಡುವುದು ಸಾಧನೆಯಾಗಬಾರದು. ಬಹುಶಃ ಇವರನ್ನು ನಾಲ್ಕೈದು ವರ್ಷಗಳ ಹಿಂದೆ ನೋಡಿದಾಗ ನೂಲ ಶ್ರೀಗಳು ಇಷ್ಟು ಕಾರ್ಯ ಮಾಡಬಹುದೇ ಎನ್ನುವ ಅನುಮಾನ ಇತ್ತು. ಆದರೆ ಇಂದು ನೂಲ ಶ್ರೀಗಳು ಜನ ಮನವನ್ನು ಗೆದ್ದಿದ್ದಾರೆ. ಎಲ್ಲರನ್ನು ಸೌಹಾರ್ದತೆಯಿಂದ ನೋಡುವ ಶ್ರೀಗಳು ಒಳ್ಳೆಯ ಪ್ರವಚನಕಾರರು ಆಗಿದ್ದಾರೆ. ನಮಗೆ ಹೆಮ್ಮೆ ಇದೆ. ಶ್ರೀಮಠದಿಂದ ಪ್ರವಚನ ಭಾಸ್ಕರ ಪ್ರಶಸ್ತಿ ನೀಡಿರುವುದು ಎಂದರು.
ಇದೇ ವೇಳೆ ಬುಡರಕಟ್ಟಿಯ ಪಂಚಾಕ್ಷರಿ ಸ್ವಾಮೀಜಿ ಉಪಸ್ಥಿತರಿದ್ದರು. ಬಿಜೆಪಿಯ ಯುವ ಮುಖಂಡ ಈರಯ್ಯ ಖೋತ, ಜಂಗಮ ಸಮಾಜದ ಅಧ್ಯಕ್ಷ ಚಂದ್ರಶೇಖರ ಸಾಲಿಸವಡಿಮಠ, ವೀರುಪಾಕ್ಷಯ್ಯ ನೀರಲಗಿಮಠ ಉಪಸ್ಥಿತರಿದ್ದರು.
