
ಬೆಳಗಾವಿ
ಧಾರವಾಡ ಜಿಲ್ಲೆಯ ಸುಕ್ಷೇತ್ರ ಗುಳೆದಕೊಪ್ಪ ಗ್ರಾಮದ ಶ್ರೀ ಈಶ್ವರ ದೇವರ ಜಾತ್ರಾ ಮಹೋತ್ಸವ ಫೆಬ್ರವರಿ 12ರಿಂದ 16ರವರೆಗೆ ನಡೆಯಲಿದ್ದು, ಪೂರ್ವಭಾವಿಯಾಗಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸೋಮವಾರ ನಡೆಯಿತು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ವೇಳೆ ಶಾಸಕ ಆಸೀಫ್ ಸೇಠ್, ಕೆಎಸ್‌ಆರ್‌ಟಿಸಿ ನಿಗಮದ ಉಪಾಧ್ಯಕ್ಷ ಸುನೀಲ್ ಹನಮಣ್ಣವರ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಸಬರಾಜ್ ರಾಯವ್ವಗೋಳ, ಹಿರಿಯ ಪತ್ರಕರ್ತರಾದ ಶ್ರೀಕಾಂತ್ ಕುಬಕಟ್ಟಿ, ಚಂದ್ರು ಶ್ರೀರಾಮುಡು, ಮಂಜುನಾಥ್ ಪಾಟೀಲ್, ಚಂದ್ರು ಸುಗಂಧಿ, ದಲಿತ ಸಂಘಟನೆ ಮುಖಂಡ ಸಂತೋಷ್ ಕಾಂಬ್ಳೆ ಉಪಸ್ಥಿತರಿದ್ದರು.
ಬೆಳಗಾವಿ ಟಿವಿ 9 ಹಿರಿಯ ವರದಿಗಾರ ಸಹದೇವ ಮಾನೆ ನೇತೃತ್ವದಲ್ಲಿ ಈ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಗುಳೇದಕೊಪ್ಪ ಗ್ರಾಮದ ಹಿರಿಯರಾದ ವಿಠಲ ಪಿರಗಾರ, ಶಿವಾಜಿ ಜಾಧವ, ಗುರುಪಾದ, ಮಹೇಶ್, ಕುಮಾರ್ ಚವ್ಹಾಣ ಉಪಸ್ಥಿತರಿದ್ದರು .
ನೂರಾರು ವರ್ಷಗಳ ಇತಿಹಾಸ ಇರುವ ಈಶ್ವರ ದೇವಸ್ಥಾನ ಆನೇಕ ಪವಾಡಗಳ ನೆಲೆಯಾಗಿದೆ. ಪ್ರತಿ ವರ್ಷದಂತೆ ಈ ಸಲವೋ ಅದ್ಧೂರಿ ಜಾತ್ರಾ ಮಹೋತ್ಸವ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ವಿಶೇಷವಾಗಿ ಈಶ್ವರ ದೇವರ ನೂತನ ತೇರು ನಿರ್ಮಾಣ ಮಾಡಲಾಗಿದ್ದು, ಫೆಬ್ರವರಿ 16ರಂದು ಪ್ರಪ್ರಥಮವಾಗಿ ತೇರು ಎಳೆಯಲೂ ನಿರ್ಧರಿಸಲಾಗಿದೆ.
ಸತತ 5 ದಿನಗಳ ಕಾಲ ಮಹಾ ಗಣಪತಿ ಹೋಮ, ಮಹಾ ರುದ್ರಾಭಿಷೇಕ, ಗಣ ಹೋಮ ಸೇರಿದಂತೆ ನಿರಂತರ ಪೂಜೆ ಪುನಸ್ಕಾರ ನಡೆಯಲಿದೆ. ನಿರಂತರ ಅನ್ನ ದಾಸೋಹ ಕೈಗೊಳ್ಳಲಾಗಿದೆ. ಪ್ರತಿದಿನವೂ ವಿವಿಧ ಹೆಸರಾಂತ ಸ್ವಾಮೀಜಿ ಹಾಗೂ ಚಿಂತಕರಿಂದ ಪ್ರವಚನ ಹಾಗೂ ಆಶೀರ್ವಚನ ನಡೆಯಲಿದೆ.
ಫೆ 13ರಂದು ಕುಂಭದೊಂದಿಗೆ ಊರಿನಲ್ಲಿ ಪಲ್ಲಕ್ಕಿ ಉತ್ಸವವಿದ್ದು, ಬಿಗ್ ಬಾಸ್ ವಿಜೇತ ಹಾಗೂ ಸರಿಗಮಪ ಖ್ಯಾತಿಯ ಹಣಮಂತ ಲಮಾಣಿ ಹಾಗೂ ತಂಡದಿಂದ ಗಾಯನವಿದೆ.
