
ಬೆಳಗಾವಿ
ಕೆಎಲ್ಇ ಶಿಕ್ಷಣ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿ ಶಿಕ್ಷಣ ಪ್ರೇಮಿ ಎನ್ನಿಸಿಕೊಂಡಿರುವ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಪೀಠಾಧಿಪತಿ, ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರೂ ಆದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರಾಮತೀರ್ಥ ನಗರದ ಶಿವಾಲಯ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೆಎಲ್ಇ ಸಂಸ್ಥೆಗಳನ್ನು ನಿರ್ಮಿಸಿದ್ದ ಸಪ್ತ ಋಷಿಗಳ ಕನಸು ನನಸು ಮಾಡಿರುವ ಅಷ್ಟಮ ಋಷಿ ಡಾ. ಪ್ರಭಾಕರ ಕೋರೆ ಅವರು ಎಂದರು.
ಡಾ. ಪ್ರಭಾಕರ ಕೋರೆ ತಮ್ಮ ಸಾಧನೆಯಿಂದ ಹೆಸರಾದಂತವರು. ಸಾಧನೆ ಮಾತಾಗಬೇಕು. ಮಾತನಾಡುವುದೇ ಸಾಧನೆತಾಗಬಾರದು. ಡಾ. ಪ್ರಭಾಕರ ಅವರ ಸಾಧನೆ ಇಡೀ ವಿಶ್ವದಲ್ಲೇ ಮಾತಾಗಿದೆ. ಈ ಶತಮಾನದ ಅಪರೂಪದ, ಯುಗದ ನಾಯಕ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ನಮಗೆ ಅತೀವ ಸಂತೋಷ ತಂದಿದೆ ಎಂದರು.
ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ತಮ್ಮ ಹೆಗಲಿಗೆ ಏರಿಸಿಕೊಂಡ ಪ್ರಭಾಕರ ಕೋರೆ ಅವರಿಗೆ ಶ್ರೀಮಠದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಸಮಾಜದ ಪರವಾಗಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, 20 ವರ್ಷಗಳಿಂದ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಶಿವಾಲಯಕ್ಕೆ ಮಾರ್ಗದರ್ಶಕರಾಗಿ ಆಶೀರ್ವಾದ ಮಾಡುತ್ತಿರುವುದು ಅಭಿನಂದನೀಯ. ಯಾರೇ ಒಳಿತನ ಮಾಡಲಿ ಅವರಿಗೆ ಬೆಂಬಲಿಸುವ ಕೆಲಸ ಶ್ರೀಗಳು ಮಾಡುತ್ತಾರೆ. ಶಿವಾಲಯದ ಕಾರ್ಯದ ಹಿಂದೆ ನಾವು ಸದಾ ಇದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಾಲಯ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಎಸ್.ಎಸ್.ಕಿವುಡಸಣ್ಣವರ, ಶಿವಾಲಯ ನಿರ್ಮಾಣವಾಗಲು ಬಹಳಷ್ಟು ಜನ ಸಹಕರಿಸಿದ್ದಾರೆ. ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತ ಶ್ರೀಗಳ ಮಾರ್ಗದರ್ಶನ ಸದಾ ಇರಲಿ ಎಂದರು.
ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ್, ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಮುರುಗೇಂದ್ರಗೌಡ ಪಾಟೀಲ್, ಚೇತನ ಅಂಗಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
