
ಬೆಳಗಾವಿ
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗ ಹುಕ್ಕೇರಿ ತಾಲೂಕಿನ ಮೋದಗಾ ಗ್ರಾಮದ ವೃದ್ಧ ಪುಂಡಲಿಕ (80) ಅವರ ಬದುಕಿಗೆ ಯಮಕನಮರಡಿ ಪೊಲೀಸ್ ಠಾಣೆಯ ಸಿಪಿಐ ಜಾವೇದ ಮುಷಾಪುರೆ ನೇತೃತ್ವದ ತಂಡ ಹಲವು ವರ್ಷಗಳಿಂದ ನಿಂತು ಹೋಗಿದ್ದ ಪಿಂಚಣಿ ಕೊಡಿಸುವಲ್ಲಿ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಪುಂಡಲಿಕ ಅವರಿಗೆ ನಾಲ್ಕು ಮಕ್ಕಳು ಪೈಕಿ, ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದರು. ಆದರೆ ಕೆಲವು ವರ್ಷಗಳ ಹಿಂದೆ ಅನಾರೋಗ್ಯದಿಂದ ಗಂಡು ಮಗ ಮೃತಪಟ್ಟಿದ್ದಾನೆ. ಉಳಿದ ಮೂವರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟು ಈಗ ಅವರು ಮಹಾರಾಷ್ಟ್ರದ ಸಿಂದದುರ್ಗ ಮತ್ತು ಮುಂಬೈ ಪ್ರದೇಶಗಳಲ್ಲಿ ತಮ್ಮ ಕುಟುಂಬಗಳೊಂದಿಗೆ ವಾಸವಾಗಿದ್ದಾರೆ.
ಕುಟುಂಬದಲ್ಲಿ ವೈವಾಹಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಹಲವು ವರ್ಷಗಳ ಹಿಂದೆ ಪತ್ನಿ ದೂರವಾದ ನಂತರ, ಪುಂಡಲಿಕ ಅವರು ಒಬ್ಬರೇ ವಾಸವಾಗಿದ್ದರುಮ ವಯೋವೃದ್ಧರಾಗಿರುವುದರಿಂದ ಯಾವುದೇ ಉದ್ಯೋಗವಿಲ್ಲದೆ ಜೀವನ ಸಾಗಿಸುತ್ತಿದ್ದು, ಜೀವನೋಪಾಯಕ್ಕಾಗಿ ಯಾವುದೇ ಸ್ಥಿರ ಆದಾಯವೂ ಇರಲಿಲ್ಲ.
ಸುಮಾರು ಐದು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಅಪ್‌ಡೇಟ್ ಆಗದ ಕಾರಣದಿಂದ ಅವರ ವೃದ್ಧಾಪ್ಯ ಪಿಂಚಣಿ ನಿಲ್ಲಿಸಲಾಗಿತ್ತು. ಇದರಿಂದ ಅವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು.
‘ಆಸರೆ’ ಯೋಜನೆಯಡಿ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿ, ಪಿಂಚಣಿ ಮರುಪ್ರಾರಂಭಿಸಲು ಕ್ರಮ ಕೈಗೊಂಡರು. ತಹಶೀಲ್ದಾರ್ ಅವರೊಂದಿಗೆ ಪತ್ರ ವ್ಯವಹಾರ ನಡೆಸಿದ ಪರಿಣಾಮ, ಏಪ್ರಿಲ್ 2026ರಿಂದ ಪುಂಡಲಿಕ ಅವರಿಗೆ ಪಿಂಚಣಿ ಮರುಪ್ರಾರಂಭವಾಗಲು ಸಾಧ್ಯವಾಗಿದೆ.
ಇದರಿಂದ ಪುಂಡಲಿಕ ಅವರ ಜೀವನಕ್ಕೆ ಮತ್ತೆ ಆಶಾಕಿರಣ ಮೂಡಿದ್ದು ಯಮಕನಮರಡಿ ಪೊಲೀಸರ ಈ ಮಾನವೀಯ ನಡೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
