Monday, November 23, 2026
HomeBelagaviಹೈಕೋಟ್೯ ವಿಚಾರಣೆ ಹೆಸರಿನಲ್ಲಿ ವೃದ್ದೆಗೆ 15 ಲಕ್ಷ ರೂ. ವಂಚನೆ

ಹೈಕೋಟ್೯ ವಿಚಾರಣೆ ಹೆಸರಿನಲ್ಲಿ ವೃದ್ದೆಗೆ 15 ಲಕ್ಷ ರೂ. ವಂಚನೆ

 

ಬೆಳಗಾವಿ
ದೆಹಲಿ ಹೈಕೋರ್ಟ್ ವಿಚಾರಣೆ ಹೆಸರಿನಲ್ಲಿ ವೃದ್ಧೆಯೊಬ್ಬರನ್ನು ಬೆದರಿಸಿ, ಹತ್ತು ದಿನಗಳ ಕಾಲ ವಿಡಿಯೋ ಕಾಲ್‌ನಲ್ಲಿ ನಿಗಾದಲ್ಲಿರಿಸಿ 15 ಲಕ್ಷ ರೂ. ವಂಚಿಸಿರುವ ಶಾಕಿಂಗ್ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಬೆಳಗಾವಿ ನಗರದ ಭಾಗ್ಯನಗರ ನಿವಾಸಿ ವಿಜಯಾ ಉಪ್ಪಿನ (83) ಅವರು ನಗರ ಸೈಬರ್ ಅಪರಾಧ ಠಾಣೆಗೆ ದೂರು ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ವಿಜಯಾ ಉಪ್ಪಿನ ಅವರಿಗೆ ಕರೆ ಮಾಡಿ ತಾವು ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರು ಹಾಗೂ ತನಿಖಾ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ಅವರ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ಸಹಕರಿಸಬೇಕೆಂದು ಹೇಳಿ ಮಾನಸಿಕ ಒತ್ತಡ ತಂದಿದ್ದಾರೆ. ಇದಾದ ಬಳಿಕ ಸುಮಾರು ಹತ್ತು ದಿನಗಳ ಕಾಲ ನಿರಂತರ ವಿಡಿಯೋ ಕಾಲ್‌ನಲ್ಲಿ ಸಂಪರ್ಕದಲ್ಲಿರಿಸಿಕೊಂಡು, ಅವರ ಪ್ರತಿಯೊಂದು ಚಟುವಟಿಕೆಯನ್ನು ಗಮನಿಸುತ್ತಿದ್ದರು. ಈ ವೇಳೆ ಬ್ಯಾಂಕ್ ಖಾತೆಗಳ ವಿವರ, ಫಿಕ್ಸಡ್ ಡೆಪಾಸಿಟ್ (ಎಫ್‌ಡಿ), ಉಳಿತಾಯ ಖಾತೆ ಹಾಗೂ ಮನೆಯಲ್ಲಿದ್ದ ಚಿನ್ನಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ವಂಚಕರು ವಿಚಾರಣೆ ಹೆಸರಿನಲ್ಲಿ ಭಯ ಹುಟ್ಟಿಸಿ, ಬ್ಯಾಂಕ್‌ನಲ್ಲಿದ್ದ ಎಫ್‌ಡಿಗಳನ್ನು ತಕ್ಷಣ ಬ್ರೇಕ್ ಮಾಡಿಸುವಂತೆ ಸೂಚಿಸಿದ್ದಾರೆ. ಅವರ ಮಾತಿಗೆ ನಂಬಿಕೆ ಇಟ್ಟ ವೃದ್ಧೆ, ಬ್ಯಾಂಕ್‌ನಲ್ಲಿದ್ದ ಠೇವಣಿಗಳನ್ನು ಮುರಿದು, ಕಳೆದ ಏ. 9ರಂದು ಒಟ್ಟು 15 ಲಕ್ಷ ರೂ. ಹಣವನ್ನು ಆರೋಪಿಗಳು ಸೂಚಿಸಿದ ಖಾತೆಗೆ ವರ್ಗಾಯಿಸಿದ್ದಾರೆ.
ಹಣ ವರ್ಗಾವಣೆ ಬಳಿಕವೂ ಕೆಲ ದಿನಗಳ ಕಾಲ ಸಂಪರ್ಕದಲ್ಲಿದ್ದ ಆರೋಪಿಗಳು ನಂತರ ಸಂಪರ್ಕ ಕಡಿತಗೊಳಿಸಿದ್ದಾರೆ. ಅನುಮಾನಗೊಂಡ ಕುಟುಂಬಸ್ಥರು ಪರಿಶೀಲನೆ ನಡೆಸಿದಾಗ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ನಗರ ಸೈಬರ್ ಅಪರಾಧ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದು, ವಂಚಕರ ಪತ್ತೆಗೆ ಮುಂದಾಗಿದ್ದಾರೆ.

Total Views 44
RELATED ARTICLES

Most Popular

Recent Comments

KNN City News
Home
E-Paper