Monday, November 23, 2026
HomeBelagaviಬೆಳಗಾವಿ ನಗರಕ್ಕೂ ಬಂದ ಅಪರಾಧ ತನಿಖೆಗೆ ಅತ್ಯಾಧುನಿಕ ಮೊಬೈಲ್ ಫೋರೆನ್ಸಿಕ್ ವ್ಯಾನ್

ಬೆಳಗಾವಿ ನಗರಕ್ಕೂ ಬಂದ ಅಪರಾಧ ತನಿಖೆಗೆ ಅತ್ಯಾಧುನಿಕ ಮೊಬೈಲ್ ಫೋರೆನ್ಸಿಕ್ ವ್ಯಾನ್

 

 

ಬೆಳಗಾವಿ
ಅಪರಾಧ ಪ್ರಕರಣಗಳ ತನಿಖೆಯನ್ನು ಮತ್ತಷ್ಟು ವೈಜ್ಞಾನಿಕ ಹಾಗೂ ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ ಬೆಂಗಳೂರು ಸಹಯೋಗದಲ್ಲಿ ಪೊಲೀಸ್ ಇಲಾಖೆಯು ಅತ್ಯಾಧುನಿಕ ಮೊಬೈಲ್ ಫೋರೆನ್ಸಿಕ್ ವ್ಯಾನ್ ಸೇವೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆರಂಭಿಸಿದ್ದು ಬೆಳಗಾವಿ ನಗರಕ್ಕೂ ಒಂದು ವಾಹನವನ್ನು ಸರಕಾರ ನೀಡಿದೆ.
ಅಪರಾಧ ಸ್ಥಳದಲ್ಲಿಯೇ ವೈಜ್ಞಾನಿಕ ಸಾಕ್ಷ್ಯಗಳನ್ನು ಪತ್ತೆಹಚ್ಚುವುದು, ದಾಖಲಿಸುವುದು, ಸಂಗ್ರಹಿಸುವುದು ಹಾಗೂ ಸುರಕ್ಷಿತವಾಗಿ ಸಂರಕ್ಷಿಸುವ ಕಾರ್ಯಕ್ಕೆ ಅಗತ್ಯವಿರುವ ಅತ್ಯಾಧುನಿಕ ಉಪಕರಣಗಳನ್ನು ಈ ವಾಹನದಲ್ಲಿ ಅಳವಡಿಸಲಾಗಿದೆ.
ಒಟ್ಟು 16 ವಿವಿಧ ಫೋರೆನ್ಸಿಕ್ ಕಿಟ್‌ಗಳನ್ನು ಒಳಗೊಂಡಿರುವ ವ್ಯಾನ್‌ನಲ್ಲಿ ಕ್ರೈಂ ಸೀನ್ ಪ್ರೊಟೆಕ್ಷನ್ ಕಿಟ್, ರಕ್ತ ಮತ್ತು ವೀರ್ಯ ತಪಾಸಣೆ ಹಾಗೂ ಸಂಗ್ರಹ ಕಿಟ್, ಡಿಎನ್‌ಎ ಮತ್ತು ಲೈಂಗಿಕ ದೌರ್ಜನ್ಯ ಸಾಕ್ಷ್ಯ ಸಂಗ್ರಹ ಕಿಟ್, ಶಸ್ತ್ರಾಸ್ತ್ರ ಮತ್ತು ಸ್ಫೋಟಕ ತಪಾಸಣೆ ಕಿಟ್, ಮಾದಕ ವಸ್ತುಗಳ ತಪಾಸಣೆ ಕಿಟ್, ಡಿಜಿಟಲ್ ಸಾಕ್ಷ್ಯ ಸಂಗ್ರಹ ಕಿಟ್, ಅಗ್ನಿ ಅವಘಡ ತನಿಖೆ ಕಿಟ್, ಸ್ಟೀರಿಯೊ ಮೈಕ್ರೋಸ್ಕೋಪ್, ಬೆರಳಚ್ಚು ಹಾಗೂ ಹೆಜ್ಜೆ ಗುರುತು ಸಂಗ್ರಹ ಕಿಟ್, ಹೈ ಇಂಟೆನ್ಸಿಟಿ ಲೈಟ್ ಸೋರ್ಸ್ ಸೇರಿದಂತೆ ಹಲವು ಆಧುನಿಕ ಸಾಧನಗಳಿವೆ.
ಇದಲ್ಲದೆ, ರೆಫ್ರಿಜರೇಟರ್, ಜಿಪಿಎಸ್ ಹೊಂದಿರುವ ಬಾಡಿ ವೋರ್ನ್ ಕ್ಯಾಮೆರಾ, ಜನರೇಟರ್, ಯುಪಿಎಸ್, ಫ್ಲಡ್ ಲೈಟ್, ಎಲ್‌ಇಡಿ ಸ್ಕ್ರೀನ್, ಅಪರಾಧ ಸ್ಥಳದ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಅತ್ಯಾಧುನಿಕ ಕ್ಯಾಮೆರಾ ಹಾಗೂ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಪ್ಯಾಕ್ ಮಾಡಲು ಅಗತ್ಯವಿರುವ ಸಾಮಗ್ರಿಗಳನ್ನು ವ್ಯಾನ್‌ನಲ್ಲಿ ಒದಗಿಸಲಾಗಿದೆ.
ಈ ವಾಹನದ ಮೂಲಕ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳು ಘಟನೆ ನಡೆದ ತಕ್ಷಣ ಸ್ಥಳಕ್ಕೆ ತೆರಳಿ ಪ್ರಮಾಣಿತ ಕಾರ್ಯವಿಧಾನಗಳ ವೈಜ್ಞಾನಿಕ ರೀತಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಬಹುದಾಗಿದೆ. ಇದರಿಂದ ಸಾಕ್ಷ್ಯಗಳು ಕಲುಷಿತವಾಗುವುದನ್ನು ತಡೆಯುವುದರ ಜೊತೆಗೆ ತನಿಖೆಯ ಗುಣಮಟ್ಟವೂ ಹೆಚ್ಚಲಿದೆ. ನ್ಯಾಯಾಲಯದಲ್ಲಿ ವೈಜ್ಞಾನಿಕ ಸಾಕ್ಷ್ಯಗಳನ್ನು ಸಮರ್ಪಕವಾಗಿ ಮಂಡಿಸುವ ಮೂಲಕ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಇದು ನೆರವಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಕನ್ನಡಮ್ಮಕ್ಕೆ ತಿಳಿಸಿದ್ದಾರೆ.

 

Total Views 220
RELATED ARTICLES

Most Popular

Recent Comments

KNN City News
Home
E-Paper