
ಬೆಳಗಾವಿ
ಜಿಲ್ಲೆಯ ಎಸ್‌ಐಆರ್ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಒಟ್ಟು 41.7 ಲಕ್ಷ ಮತದಾರರ ಪೈಕಿ 35.88 ಲಕ್ಷ ಮಂದಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಈವರೆಗೆ ಶೇ.88ರಷ್ಟು ಅರ್ಜಿ ನಮೂನೆಗಳು ವಾಪಸ್ ಬಂದಿವೆ. ಪರಿಶೀಲನೆ ವೇಳೆ 5.13 ಲಕ್ಷ ಮತದಾರರನ್ನು ಗೈರು, ಸ್ಥಳಾಂತರಗೊಂಡವರು ಹಾಗೂ ಮೃತರು ಎಂದು ಗುರುತಿಸಲಾಗಿದ್ದು, ಅದರ ವಿವರಪಟ್ಟಿಯನ್ನು ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳಿಗೆ ವಿತರಿಸಲಾಗಿದೆ. ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿ ಯಾವುದೇ ಆಕ್ಷೇಪಣೆ ಅಥವಾ ತಕರಾರುಗಳಿದ್ದರೆ ಸಲ್ಲಿಸುವಂತೆ ತಿಳಿಸಿದರು.
ಪ್ರಸ್ತುತ 4,455 ಅರ್ಜಿಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವ ಕಾರ್ಯ ಬಾಕಿಯಿದ್ದು, ಅದನ್ನು ಶೀಘ್ರ ಪೂರ್ಣಗೊಳಿಸಲು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತದಾರರ ಮಾಹಿತಿ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಕೆಲ ಲೋಪದೋಷಗಳು ಕಂಡುಬಂದಿದ್ದು, ಮತದಾರರ ಹೆಸರಿನಲ್ಲಿರುವ ತಪ್ಪುಗಳನ್ನು ಸರಿಪಡಿಸುವ ವಿಧಾನ ಕುರಿತು ಬೂತ್ ಮಟ್ಟದ ಅಧಿಕಾರಿಗಳಿಗೆ ಬಿಎಲ್‌ಒ ವಿಶೇಷ ತರಬೇತಿ ನೀಡಲಾಗಿದೆ ಎಂದರು.
ಎಸ್‌ಐಆರ್ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ದೋಷರಹಿತವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಎಲ್ಲ ಹಂತಗಳಲ್ಲೂ ಕಟ್ಟುನಿಟ್ಟಿನ ಪರಿಶೀಲನೆ ನಡೆಸಲಾಗುತ್ತಿದ್ದು, ರಾಜಕೀಯ ಪಕ್ಷಗಳ ಆಕ್ಷೇಪಣೆಗಳನ್ನು ಪರಿಗಣಿಸಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.
