
“ವಸುಧೈವ ಕುಟುಂಬಕಂ” ಎಂಬ ಭಾರತೀಯ ಸಂಸ್ಕೃತಿಯ ಉದಾತ್ತ ಸಂದೇಶವನ್ನು ಸೇವೆಯ ಮೂಲಕ ಸಾಕಾರಗೊಳಿಸುತ್ತಿರುವ ಸಂಸ್ಥೆಯೇ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮವನ್ನು ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಈ ಮಿಷನ್, ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶ ಕ್ಷೇತ್ರಗಳಲ್ಲಿ ಉಚಿತ ಸೇವೆ ನೀಡುವ ಮೂಲಕ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಲಕ್ಷಾಂತರ ಜನರ ಬದುಕಿನಲ್ಲಿ ಆಶಾಕಿರಣವಾಗಿದೆ. ಅಧ್ಯಾತ್ಮ ಸಾಧನೆಗೆ ಸೇವಾ ಪರಂಪರೆಯ ಹೊಸ ಭಾಷ್ಯ ಬರೆದಿದೆ.
1979ರ ಜುಲೈ 26ರಂದು ಛತ್ತೀಸಗಡದ ಬಿಲಾಸ್ಪುರದಲ್ಲಿ ಜನಿಸಿದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು, ಪುಟ್ಟಪರ್ತಿಯ ಶ್ರೀ ಸತ್ಯಸಾಯಿ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ವೇಳೆ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರಿಂದ ಸೇವೆ, ಶಿಸ್ತು ಮತ್ತು ಮಾನವೀಯ ಮೌಲ್ಯಗಳ ಪಾಠ ಕಲಿತರು. 2011ರ ಬಳಿಕ ಭಗವಾನ್ ಬಾಬಾ ಅವರ ಸೇವಾ ತತ್ವವನ್ನು ಮುಂದುವರಿಸುವ ಅವಕಾಶ ಅವರಿಗೆ ಬಾಬಾ ಅವರಿಂದ ದೊರಕಿತು. ನಂತರ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಮೂಲಕ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಹೊಸ ದಿಕ್ಕು ನೀಡಿದರು. ಇಂದು ಭಾರತ, ಅಮೆರಿಕ, ಆಸ್ಟ್ರೇಲಿಯಾ, ಶ್ರೀಲಂಕಾ, ಫಿಜಿ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಿಷನ್ನ ಸೇವಾ ಕಾರ್ಯಗಳು ವಿಸ್ತರಿಸಿವೆ.
ಸರ್ವಾಂಗೀಣ ಶಿಕ್ಷಣ
ಮೌಲ್ಯಾಧಾರಿತ ಹಾಗೂ ಆಧ್ಯಾತ್ಮಿಕ ಶಿಕ್ಷಣವೇ ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಪಾಯ ಎಂಬ ನಂಬಿಕೆಯಿಂದ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂ, ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಹಾಗೂ ವೇದ ಗುರುಕುಲಂ ಮೂಲಕ ಆರನೇ ತರಗತಿಯಿಂದ ಸಂಶೋಧನಾ ಹಂತದವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದೆ. ದೇಶದ 26 ಶಿಕ್ಷಣ ಕೇಂದ್ರಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇವರಲ್ಲಿ ಬಹುತೇಕರು ಗ್ರಾಮೀಣ ಹಿನ್ನೆಲೆಯವರು. 2023ರಲ್ಲಿ ಭಾರತದ ಮೊದಲ ಉಚಿತ ವೈದ್ಯಕೀಯ ಕಾಲೇಜು ಆದ ‘ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ’ ಆರಂಭವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರುವ ಸೇವಾ ಮನೋಭಾವದ ವೈದ್ಯರನ್ನು ರೂಪಿಸುವ ಗುರಿಯನ್ನು ಹೊಂದಿದೆ.
ಕೋಟಿ ಮಕ್ಕಳಿಗೆ ಪೌಷ್ಟಿಕತೆ ಕೊಡುವ ಸಾಯಿ ಶ್ಯೂರ್
ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಆರಂಭವಾದ ಸಾಯಿಶ್ಯೂರ್ ಪೌಷ್ಟಿಕ ಉಪಾಹಾರ ಯೋಜನೆ ಇಂದು ದೇಶದ ಒಂದು ಕೋಟಿಗೂ ಅಧಿಕ ಸರ್ಕಾರಿ ಶಾಲಾ ಮಕ್ಕಳನ್ನು ತಲುಪಿದೆ. ರಾಗಿ ಹಾಗೂ ಅಗತ್ಯ ಪೌಷ್ಟಿಕಾಂಶಗಳನ್ನು ಒಳಗೊಂಡ ಈ ಮಿಶ್ರಣವನ್ನು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿತರಿಸಲಾಗುತ್ತಿದೆ. ಈ ಯೋಜನೆಯ ಮೂಲಕ ಮಕ್ಕಳ ಆರೋಗ್ಯ ಸುಧಾರಿಸುವುದರ ಜೊತೆಗೆ ರಾಜ್ಯದ ಸಾವಿರಾರು ರಾಗಿ ಬೆಳೆಗಾರರಿಗೆ ಸ್ಥಿರ ಮಾರುಕಟ್ಟೆಯೂ ದೊರಕುತ್ತಿದೆ.
ಬಿಲ್ಲಿಂಗ್ ಕೌಂಟರ್ ಇಲ್ಲದ ಉಚಿತ ಆಸ್ಪತ್ರೆ
ಸತ್ಯಸಾಯಿ ಗ್ರಾಮದಲ್ಲಿರುವ ಶ್ರೀ ಮಧುಸೂದನ ಸಾಯಿ ಆಸ್ಪತ್ರೆ ಯಾವುದೇ ಬಿಲ್ಲಿಂಗ್ ಕೌಂಟರ್ ಇಲ್ಲದೆ ಸಂಪೂರ್ಣ ಉಚಿತ ಆರೋಗ್ಯ ಸೇವೆ ನೀಡುತ್ತಿರುವುದು ಇದರ ವಿಶಿಷ್ಟತೆ. ಪ್ರತಿದಿನ ಸಾವಿರಾರು ರೋಗಿಗಳಿಗೆ ಚಿಕಿತ್ಸೆ, ಹೃದಯ ಶಸ್ತ್ರಚಿಕಿತ್ಸೆ, ನವಜಾತ ಶಿಶುಗಳ ಆರೈಕೆ, ಎಂಆರ್ಐ, ಸಿಟಿ ಸ್ಕ್ಯಾನ್ ಸೇರಿದಂತೆ ವಿವಿಧ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಳು ಇಲ್ಲಿ ಲಭ್ಯವಿವೆ. ಭಾರತ ಮತ್ತು ವಿದೇಶಗಳಲ್ಲಿನ ಆಸ್ಪತ್ರೆಗಳ ಮೂಲಕ ಇದುವರೆಗೆ 78 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು, 50 ಲಕ್ಷಕ್ಕೂ ಅಧಿಕ ಹೊರರೋಗಿ ಸೇವೆಗಳು ಹಾಗೂ 40 ಸಾವಿರಕ್ಕೂ ಹೆಚ್ಚು ಮಕ್ಕಳ ಹೃದಯ ಚಿಕಿತ್ಸೆಗಳು ಉಚಿತವಾಗಿ ನೆರವೇರಿವೆ.
“ಒಂದು ಜಗತ್ತು, ಒಂದು ಕುಟುಂಬ” ಎಂಬ ಸಂದೇಶವನ್ನು ಸೇವೆಯ ಮೂಲಕ ಸಾಕಾರಗೊಳಿಸುತ್ತಿರುವ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್, ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶದ ಮೂಲಕ ಸಮಾನ ಅವಕಾಶಗಳನ್ನು ಸೃಷ್ಟಿಸಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೆಲಸ ಮಾಡುತ್ತಿದೆ. “ತ್ಯಾಗೇನೈಕೇ ಅಮೃತತ್ವಮಾನಶುಃ” ಎಂಬ ಉಪನಿಷತ್ತಿನ ಸಂದೇಶವನ್ನು ಕಾರ್ಯರೂಪಕ್ಕೆ ತರುತ್ತಿರುವ ಈ ಮಿಷನ್, ಸೇವೆಯೇ ಶ್ರೇಷ್ಠ ಸಾಧನೆ ಎಂಬುದನ್ನು ಜಗತ್ತಿಗೆ ಸಾರುತ್ತಿದೆ.
ಸಂಸ್ಥೆಯ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಮತ್ತು ಸಂಸ್ಥೆಯ ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಳ್ಳಲು www.owofmission.org ಜಾಲತಾಣ ನೋಡಿ.
