ಕನ್ನಡಮ್ಮ ಸುದ್ದಿ

ಖಾನಾಪುರ: ಸಿ ಟಿ ರವಿ ಪ್ರಕರಣದಲ್ಲಿ ಖಾನಾಪುರ ಪಿಆಯ್ ಮಂಜುನಾಥ ನಾಯಕ ಅವರ ಅಮಾನತ್ತು ಆದೇಶ ಮಾಡಿದ ಹಿರಿಯ ಅಧಿಕಾರಿಗಳ ನಡೆ ಅಕ್ಷಮ್ಯ ಇಲ್ಲಿ ಮಂಜುನಾಥ ನಾಯಕ ಅವರನ್ನ ಹರಕೆಯ ಕುರಿ ಮಾಡಿದ್ದು ಇದು ತಪ್ಪು ನಿರ್ಧಾರವಾಗಿದ್ದು ತಕ್ಷಣವೇ ಮಂಜುನಾಥ ನಾಯಕ ಅವರನ್ನ ಕರ್ತವ್ಯಕ್ಕೆ ನಿಯೋಜನೆಗೊಳಿಸಬೇಕು ಇಲ್ಲವಾದಲ್ಲಿ ಸೋಮವಾರ ಉಗ್ರ ಹೋರಾಟ ಮಾಡುವದಾಗಿ ವಿವಿಧ ಸಂಘಟನೆಗಳ ಮುಖಂಡರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಖಾನಾಪುರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ ವಿವಿಧ ಕನ್ನಡಪರ,ದಲಿತ ಪರ, ಮತ್ತು ರೈತ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ವಿಠ್ಠಲ ಹಿಂಡಲಕರ ಕಳೆದ ಎರಡು ವರ್ಷಗಳಿಂದ ಮಂಜುನಾಥ ನಾಯಕ ಅವರ ಸೇವೆ ಅನನ್ಯವಾಗಿದ್ದು ಎಲ್ಲ ಭಾಷೆ ಎಲ್ಲ ಧರ್ಮದ ಜೊತೆ ಉತ್ತಮ ಭಾಂಧವ್ಯ ಹೊಂದಿದ್ದರು ಅಲ್ಲದೇ ಕಾನೂನು ಸುವ್ಯವಸ್ಥೆ ಕಾಪಾಡುವದರಲ್ಲಿ ಕೂಡ ಸೈ ಎನಿಸಿಕೊಂಡಿದ್ದರು ಈಗ ಅಂತಹ ಅಧಿಕಾರಿಯನ್ನ ಅಮಾನತ್ತು ಮಾಡಿರುವದು ವಿಷಾಧನೀಯ ಎಂದರು.
ಈ ವೇಳೆ ಮಾತನಾಡಿದ ದಲಿತ ಮುಖಂಡರಾದ ರಾಜಶೇಖರ ಹಿಂಡಲಗಿ ಹಾಗೂ ಸಂದೀಪ ಚಲವಾದಿ ಸಿ ಟಿ ರವಿಯವರ ಪ್ರಕರಣದಲ್ಲಿ ಖಾನಾಪುರ ಪಿ ಆಯ್ ಮಂಜುನಾಥ ನಾಯಕ ಅವರದು ಯಾವುದೇ ಪಾತ್ರವಿಲ್ಲದಿದ್ದರೂ ಅವರನ್ನ ಅಮಾನತ್ತು ಮಾಡಿದ್ದು ಖಂಡನೀಯ ಹಾಗೆ ನೋಡುವದಾದರೆ ಅವತ್ತು ಪೊಲೀಸ್ ವರಿಷ್ಠಾಧಿಕಾರಿ,ಕಮಿಷನರ್ ಸೇರಿದಂತೆ ಇನ್ನೂ ಉನ್ನತ ಅಧಿಕಾರಿಗಳಿದ್ದರು ಹೀಗಾಗಿ ಮಂಜುನಾಥ ಅವರು ಅವರ ಆದೇಶ ಪಾಲನೆ ಮಾಡಿದ್ದು ಒಂದು ವೇಳೆ ಅಮಾನತ್ತು ಮಾಡುವದಾದರೆ ಎಲ್ಲರನ್ನೂ ಮಾಡಬೇಕು ಮತ್ತು ಸೋಮವಾರದ ಒಳಗಾಗಿ ನೀಡಿರುವ ಅಮಾನತ್ತು ಆದೇಶವನ್ನ ವಾಪಸ್ ಪಡೆದು ಮಂಜುನಾಥ ನಾಯಕ ಅವರನ್ನು ಸೇವೆಯಲ್ಲಿ ಮುಂದುವರೆಸಬೇಕು ಇಲ್ಲವಾದಲ್ಲಿ ಸೋಮವಾರ ಎಲ್ಲ ಸಂಘಟನೆಗಳಿಂದ ಖಾನಾಪುರ ಪಟ್ಟಣದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವದು ಎಂದರು.
ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ದಶರಥ ಬನೋಶಿ,ಜಯವಂತ ನಿಡಗಲ್ಕರ್,ಬಸವರಾಜ ಬಡಿಗೇರ,ಗಡಿನಾಡು ಹಿತರಕ್ಷಣಾ ವೇದಿಕೆಯ ರಾಜು ಖಾತೇದಾರ,ದಲಿತ ಮುಖಂಡರಾದ ಉಮೇಶ್ ಕೋಲ್ಕಾರ್,ರಾಘವೇಂದ್ರ ಚಲವಾದಿ,ಮಾರುತಿ,ರೈತ ಮುಖಂಡ ಅಕಿಲಸಾಬ್ ಮುನವಳ್ಳಿ, ಸಮಾಜ ಸೇವಕರಾದ ಶಿವಾ ಬಾಗವಾಡಕರ ಮತ್ತಿರರು ಉಪಸ್ಥಿತರಿದ್ದರು.
ವರದಿ:ಪ್ರಸನ್ನ ಕುಂಬಾರ
ಖಾನಾಪುರ
