ಕನ್ನಡಮ್ಮ ಸುದ್ದಿ-ಹೊಸಪೇಟೆ : ನೀರಾವರಿ ಸಲಹಾ ಸಮಿತಿಯ ನಿರ್ಧಾರದಂತೆ ತುಂಗಭದ್ರಾ ಎಡದಂಡೆಯ ಕಾಲುವೆಯಲ್ಲಿ ಹರಿಸಲಾಗುತ್ತಿರುವ 3800 ಕ್ಯೂಸೆಕ್ಸ್ ನೀರು ಕೊನೆಯ ಭಾಗದ ಕಾಲುವೆಯ ರೈತರಿಗೂ ಸಮರ್ಪಕವಾಗಿ ಸರಬರಾಜು ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಸೂಚನೆ ನೀಡಿದರು .
ಶುಕ್ರವಾರ ಹೊಸಪೇಟೆ ಯಲ್ಲಿ ತುಂಗಭದ್ರಾ ಅಣೆಕಟ್ಟಿನ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜನವರಿ 1 ರಿಂದ ಎಡದಂಡೆ ಕಾಲುವೆಯಲ್ಲಿ 3800 ಕ್ಯೂಸೆಕ್ಸ್ ನೀರು ಹರಿಸುವಂತೆ ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಗಿತ್ತು. ಇದರಂತೆ ಕಾಲುವೆಯಲ್ಲಿ ನೀರನ್ನು ಹರಿಯಬಿಡಲಾಗಿದ್ದು, ಎಲ್ಲಾ ಭಾಗದ ರೈತರಿಗೆ ಈ ನೀರು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಇದರಿಂದ ಬೆಳೆ ಹಾನಿಯಾಗುವ ಆತಂಕದಿಂದ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಎಲ್ಲಾ ಭಾಗಕ್ಕೂ ಸಮರ್ಪಕವಾಗಿ ನೀರು ದೊರೆಯಲು ಗೇಜ್ ಮೆಂಟೇನ್ ಮಾಡುವುದು ಬಹಳ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.
ದೂರವಾಣಿ ಮೂಲಕ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ ಅವರೊಂದಿಗೆ ಮಾತನಾಡಿದ ಸಚಿವರು, ಸಮಪರ್ಕ ನೀರು ನಿರ್ವಹಣೆಯ ನಿಟ್ಟಿನಲ್ಲಿ ಗುಲ್ಬರ್ಗಾ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡುವಂತೆ ಸೂಚಿಸಿದರು. ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಜಿಲ್ಲೆಗಳ ಮಧ್ಯೆ ಸಮನ್ವಯತೆ ಸಾಧಿಸಬೇಕು. ನೀರು ಎಲ್ಲಾ ಭಾಗದ ರೈತರಿಗೂ ಸಮರ್ಪಕವಾಗಿ ಲಭ್ಯವಾಗುವಂತೆ ಕ್ರಮವಹಿಸಬೇಕು ಎಂದು ಹೇಳಿದರು.
ಮುಂದಿನ 10 ದಿನಗಳು ಬಹಳ ಪ್ರಮುಖವಾಗಿದ್ದು, 69 ಮೈಲು ಕಾಲುವೆಯ ಕೊನೆಯ ಭಾಗದ (ಟೈಲ್ ಎಂಡ್) ರೈತರಿಗೂ ಸಮರ್ಪಕ ನೀರು ದೊರೆಯುವದನ್ನ ಖಾತ್ರಿ ಪಡಿಸಿಕೊಳ್ಳುವಂತೆ ಸಚಿವರು ಸೂಚನೆ ನೀಡಿದರು. ಸಭೆಯಲ್ಲಿ ಕೊಪ್ಪಳ ಸಂಸದರಾದ ರಾಜಶೇಖರ್ ಬಸವರಾಜ ಹಿಟ್ನಾಳ್, ತುಂಗಭದ್ರಾ ಅಣೆಕಟ್ಟಿನ ಮುಖ್ಯ ಅಭಿಯಂತರರು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
