* ಚಿಕ್ಕಬೆಣಕಲ್ , ಹಿರೇಬೆಣಕಲ್, ಮುಕ್ಕುಂಪಿ, ಯಡಹಳ್ಳಿ, ಲಿಂಗದಳ್ಳಿ, ಹೇಮಗುಡ್ಡ ಗ್ರಾಮಸ್ಥರ ಆಕ್ರೋಶ
ಕನ್ನಡಮ್ಮ ಸುದ್ದಿ-ಗಂಗಾವತಿ: ಪರಮಾಣು ವಿದ್ಯುತ್ ಸ್ಥಾವರಕ್ಕಾಗಿ ಭೂಮಿ ಗುರುತಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿರುವ ತಹಶೀಲ್ದಾರ್ ಕ್ರಮವನ್ನು ಖಂಡಿಸಿ ಹೇಮಗುಡ್ಡ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ನೂರಾರು ರೈತರು, ಗ್ರಾಮಸ್ಥರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ಟೋಲ್ ಬಳಿ ಚಿಕ್ಕಬೆಣಕಲ್ ಗ್ರಾ.ಪಂ. ವ್ಯಾಪ್ತಿಯ ಹಿರೇಬೆಣಕಲ್, ಮುಕ್ಕುಂಪಿ, ಯಡಹಳ್ಳಿ, ಲಿಂಗದಳ್ಳಿ, ಹೇಮಗುಡ್ಡ ಸೇರಿ ವಿವಿಧ ಗ್ರಾಮಗಳ ರೈತರು, ಗ್ರಾಮಸ್ಥರು, ಮಹಿಳೆಯರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಲು ಮುಂದಾದಾಗ, ಪೊಲೀಸರು ಟೈರ್‌ಗಳನ್ನು ಕಸಿದುಕೊಂಡು, ಬೆಂಕಿ ಹಚ್ಚುವ ಕಾರ್ಯ ತಡೆದರು. ಕೇಂದ್ರ ಸರ್ಕಾರ ಸೇರಿ ಜಿಲ್ಲಾಧಿಕಾರಿ, ತಹಶೀಲ್ದಾರ್ ವಿರುದ್ಧ ಧಿಕ್ಕಾರ ಕೂಗಿ, ಶಕ್ತಿ ಪ್ರದರ್ಶಿಸಿದರು.
‘ಚಿಕ್ಕಬೆಣಕಲ್ ಈ ಭಾಗದ ರೈತರ ಜೀವನಾಡಿ ಆಗಿದೆ. ಫಲವತ್ತಾದ ಭೂಮಿ ಬಳಸಿ ಕೇಂದ್ರ ಸರ್ಕಾರ ಪರಮಾಣು ವಿದ್ಯುತ್ ಸ್ಥಾವರ ನಿರ್ಮಿಸಲು ಜಿಲ್ಲಾಡಳಿತದ ಮೂಲಕ ಲಭ್ಯವಿರುವ ಭೂಮಿ ಮಾಹಿತಿ ನೀಡಿರುವುದು ಪಡೆದಿರುವುದು ಖಂಡನೀಯ’ ಎಂದು ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣ ವಿರೋಧಿ ಹೋರಾಟ ಸಮಿತಿ ಸಂಚಾಲಕ ಎಚ್.ಆರ್. ಶ್ರೀನಾಥ ಹೇಳಿದರು.
ಕಲ್ಮಠದ ಕೊಟ್ಟೂರೇಶ್ವರ ಸ್ವಾಮೀಜಿ ಮಾತನಾಡಿ, ‘ಪರಮಾಣು ಸ್ಥಾವರ ಸ್ಥಾಪನೆಯಾದರೆ ನಿರ್ಮಾಣವಾದರೆ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜತೆಗೆ ಪರಿಸರವು ಸಹ ನಾಶವಾಗುತ್ತದೆ. ಎಂದರು. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ, ಜೋಗದ ನಾರಾಯಣಪ್ಪ ನಾಯಕ, ಕರವೇ ಸಂಘಟನೆಯ ಪಂಪಣ್ಣ ನಾಯಕ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
